ತುಮಕೂರು: ವಿವಾದ ಮತ್ತು ಪ್ರತಿಭಟನೆಗಳ ಕಾರಣ ಕಳೆದ ಹತ್ತು ತಿಂಗಳಿನಿಂದ ಸ್ಥಗಿತಗೊಂಡಿದ್ದ ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ರಾಜ್ಯ ಸರ್ಕಾರ ಮರುಜೀವ ನೀಡಲು ಮುಂದಾಗಿದೆ. ಈ ಬೆಳವಣಿಗೆ ತುಮಕೂರು ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಸಂಘರ್ಷಕ್ಕೆ ಕಾರಣವಾಗಿದ್ದು, ಯೋಜನೆ ಪರ ಹಾಗೂ ವಿರೋಧಿ ನಾಯಕರ ನಡುವಿನ ವಾಕ್ಸಮರ ತೀವ್ರಗೊಳ್ಳುತ್ತಿದೆ.
ಹೇಮಾವತಿ ಜಲಾಶಯದ ನೀರನ್ನು ಲಿಂಕಿಂಗ್ ಕೆನಾಲ್ ಮೂಲಕ ಕುಣಿಗಲ್ ಭಾಗಕ್ಕೆ ಹರಿಸುವ ಯೋಜನೆ ಆರಂಭದಿಂದಲೇ ರೈತರ ವಿರೋಧಕ್ಕೆ ಗುರಿಯಾಗಿತ್ತು. ಕಾಮಗಾರಿ ಸ್ಥಳದಲ್ಲಿ ನಡೆದ ಪ್ರತಿಭಟನೆಗಳ ನಂತರ ಯೋಜನೆ ಸ್ಥಗಿತಗೊಂಡಿತ್ತು.
ಈಗ ಸರ್ಕಾರ ಯೋಜನೆಯನ್ನು ಪುನರಾರಂಭಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ರೈತರೊಂದಿಗೆ ಚರ್ಚಿಸಿ ವಿಶ್ವಾಸ ಮೂಡಿಸಿದ ಬಳಿಕವೇ ಕಾಮಗಾರಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಕುಣಿಗಲ್ ಶಾಸಕ ಡಾ. ರಂಗನಾಥ್, ಕುಣಿಗಲ್ ಭಾಗದ ಜನರಿಗೆ ಹೇಮಾವತಿ ನೀರಿನ ಹಕ್ಕು ದೊರೆಯಲೇಬೇಕು. ನೀರಿನ ಹಂಚಿಕೆಯಲ್ಲಿ ನ್ಯಾಯ ಸಿಗುವವರೆಗೆ ಯೋಜನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಸರ್ಕಾರದ ಹೊಸ ನಿರ್ಧಾರದಿಂದ ಗುಬ್ಬಿ, ಕುಣಿಗಲ್ ಹಾಗೂ ಮಾಗಡಿ ಭಾಗಗಳನ್ನು ಸಂಪರ್ಕಿಸುವ ಈ ಬಹುಚರ್ಚಿತ ಯೋಜನೆ ಮತ್ತೆ ರಾಜಕೀಯ ಹಾಗೂ ರೈತ ಹೋರಾಟದ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.



