HomeGadag Newsಸರಣಿ ಮನೆಗಳ್ಳತನಕ್ಕೆ ಬ್ರೇಕ್: ಮೂವರು ಬಂಧನ, ₹15 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶ

ಸರಣಿ ಮನೆಗಳ್ಳತನಕ್ಕೆ ಬ್ರೇಕ್: ಮೂವರು ಬಂಧನ, ₹15 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ 20 ದಿನಗಳಿಂದ ಗದಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮನೆಗಳ್ಳತನ ನಡೆಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಅಂತರ್ ಜಿಲ್ಲಾ ಕಳ್ಳರ ತಂಡವನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಗುರುವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಮೇ 11ರಿಂದ ಜೂನ್ 3ರವರೆಗೆ ಮುಂಡರಗಿ, ನರೇಗಲ್ಲ, ರೋಣ ಹಾಗೂ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 8 ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಒಂದೇ ಮಾದರಿಯಲ್ಲಿ ಕಳ್ಳತನಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗಿತ್ತು.

ಜೂನ್ 7ರಂದು ಮುಂಡರಗಿ ಪಟ್ಟಣದ ಬ್ಯಾಲವಾಡಗಿ ಕ್ರಾಸ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಲಕ್ಷ್ಮೇಶ್ವರದ ಹನುಮಂತ ಕುಂಚಿಕೊರವರ, ಶಿಗ್ಗಾಂವಿಯ ಮಹಾಂತೇಶ ಕುಂಚಿಕೊರವರ ಹಾಗೂ ದುರುಗೇಶ ಗುತ್ತಲ್ ಬಂಧಿತ ಆರೋಪಿಗಳಾಗಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಗದಗ ಜಿಲ್ಲೆಯಷ್ಟೇ ಅಲ್ಲದೆ ಧಾರವಾಡ, ದಾವಣಗೆರೆ ಹಾಗೂ ಮೈಸೂರು ಜಿಲ್ಲೆಗಳಲ್ಲಿಯೂ ಮನೆಗಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಒಟ್ಟು 13 ಮನೆಗಳ್ಳತನ ಪ್ರಕರಣಗಳಲ್ಲಿ ಇವರ ಕೈವಾಡ ಇರುವುದು ತನಿಖೆಯಿಂದ ದೃಢಪಟ್ಟಿದೆ.

ನರಗುಂದ ಉಪ ವಿಭಾಗದ ಡಿವೈಎಸ್ಪಿ ಪ್ರಭುಗೌಡ ಡಿ.ಕೆ. ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಅಮ್ಮಣಗೌಡ ಪಾಟೀಲ, ಬಿ.ಎನ್. ಯಳವತ್ತಿ ಹಾಗೂ ಪ್ರಕಾಶ ಬಣಕಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಈ ತಂಡದಲ್ಲಿ ಸಿಬ್ಬಂದಿಗಳಾದ ಜಿ.ಬಿ. ಬಳ್ಳಾರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಗಂಗಾಧರ ಮಜ್ಜಿಗಿ, ಮಹೇಶ ಗೊಳಗೊಳಕಿ, ಚಂದ್ರಶೇಖರ ದೊಡ್ಡಮನಿ, ಕಿರಣ ಹಿರೇಮಠ, ಮಂಜು ಬಂಡಿವಡ್ಡರ ಹಾಗೂ ಶಿವು ಹುಬ್ಬಳ್ಳಿ ಭಾಗವಹಿಸಿದ್ದರು. ತಾಂತ್ರಿಕ ವಿಭಾಗದ ಖಲಂದರ ನದಾಫ್, ಗುರು ಬೂದಿಹಾಳ ಹಾಗೂ ಸಂಜು ಕೋರಡೂರ ಸಹ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದರು.

“ಸರಣಿ ಮನೆಗಳ್ಳತನ ಪ್ರಕರಣಗಳಿಂದ ಸಾರ್ವಜನಿಕರಲ್ಲಿ ಉಂಟಾಗಿದ್ದ ಆತಂಕ ನಿವಾರಿಸಲು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ನಿಖರ ಕಾರ್ಯಾಚರಣೆಯಿಂದ 13 ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ.”

– ರೋಹನ್ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

15 ಲಕ್ಷ ರೂ. ಮೌಲ್ಯದ ಕಳ್ಳಸೊತ್ತು ವಶ

ಆರೋಪಿಗಳಿಂದ 145 ಗ್ರಾಂ ಬಂಗಾರದ ಆಭರಣ, 332 ಗ್ರಾಂ ಬೆಳ್ಳಿ ಆಭರಣ ಹಾಗೂ ₹50 ಸಾವಿರ ನಗದು ಸೇರಿ ಒಟ್ಟು ಸುಮಾರು ₹15 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!