ವಿಜಯಸಾಕ್ಷಿ ಸುದ್ದಿ, ಕಮಲಾಪುರ: ಭೌತಿಕ ಸಂಪತ್ತು ಎಷ್ಟೇ ಇದ್ದರೂ ಅದರಿಂದ ಶಾಶ್ವತ ಶಾಂತಿ ಮತ್ತು ನೆಮ್ಮದಿ ದೊರೆಯುವುದಿಲ್ಲ. ಪವಿತ್ರ ಧರ್ಮಾಚರಣೆಯಿಂದ ಮಾತ್ರ ಜೀವನ ಉಜ್ವಲಗೊಳ್ಳಲು ಸಾಧ್ಯ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಗೊಣಗಿ ಗ್ರಾಮದಲ್ಲಿ ನೂತನ ಶ್ರೀ ಹನುಮಾನ್ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಅಂಗವಾಗಿ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮದ ಮಹತ್ವ ಮತ್ತು ಮಾನವ ಜೀವನದಲ್ಲಿ ಅದರ ಪಾತ್ರದ ಕುರಿತು ವಿವರಿಸಿದರು.
ಹೊತ್ತ ಭೂಮಿ ಮತ್ತು ಹೆತ್ತ ತಾಯಿ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯವಾಗಿದೆ. ಧರ್ಮವೆಂದರೆ ಜಾತಿಯಲ್ಲ, ಜಾತಿಗಿಂತ ಧರ್ಮ ದೊಡ್ಡದು. ಧರ್ಮದಲ್ಲಿರುವ ವಿಶಾಲ ಮನೋಭಾವನೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ. ದೇವರು, ಧರ್ಮ ಮತ್ತು ಗುರುಗಳು ಜೀವನದ ವಿಕಾಸಕ್ಕೆ ಅವಶ್ಯಕವಾಗಿದ್ದು, ಸತ್ಯದ ತಳಹದಿಯ ಮೇಲೆ ಮಾನವ ಜೀವನ ರೂಪುಗೊಳ್ಳಬೇಕು ಎಂದು ಹೇಳಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಬೋಧಿಸಿದ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ದಶವಿಧ ಸೂತ್ರಗಳು ಬದುಕಿನ ವಿಕಾಸಕ್ಕೆ ಮಾರ್ಗದರ್ಶಿಯಾಗಿವೆ ಎಂದು ತಿಳಿಸಿದರು.
ಹೊನ್ನಕಿರಣಗಿ ಚಂದ್ರಗುಂಡ ಶಿವಾಚಾರ್ಯ ಸ್ವಾಮಿಗಳು ಧರ್ಮ ಜಾಗೃತಿ ಸಮಾರಂಭ ಉದ್ಘಾಟಿಸಿ ವೀರಶೈವ ಧರ್ಮದ ಮೌಲ್ಯಗಳ ಕುರಿತು ಮಾತನಾಡಿದರು. ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ದೇವಾಲಯ ಸಂಸ್ಕೃತಿ ಹಾಗೂ ಅದರ ಸಾಮಾಜಿಕ ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ ಸರಡಗಿ, ಸುಗೂರು, ನರನಾಳ, ಆಂದೋಲಾ, ಮಂಗಲಗಿ, ತೆಂಗಳಿ, ಕೊಡ್ಲಿ, ರಟಕಲ್, ನಾಗೂರು, ಹೊಸಳ್ಳಿ, ಐನಾಪುರ ಸೇರಿದಂತೆ ವಿವಿಧ ಮಠಗಳ ಶ್ರೀಗಳು ಪಾಲ್ಗೊಂಡಿದ್ದರು. ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಗೊಣಗಿ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ-ಸಂಭ್ರಮದಿಂದ ನಡೆಯಿತು. ನಂತರ ರೇವಗ್ಗಿ-ರಟಕಲ್‌ನ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
“ಭೌತಿಕ ಸಂಪತ್ತು ಜೀವನಕ್ಕೆ ಸೌಕರ್ಯ ನೀಡಬಹುದು. ಆದರೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುವುದು ಧರ್ಮಾಚರಣೆ ಮಾತ್ರ. ಜಾತಿಗಿಂತ ಧರ್ಮ ದೊಡ್ಡದು ಎಂಬ ಅರಿವು ಸಮಾಜದಲ್ಲಿ ಬೆಳೆಯಬೇಕು.”
ಡಾ. ವೀರಸೋಮೇಶ್ವರ ಜಗದ್ಗುರುಗಳು
ಶ್ರೀ ರಂಭಾಪುರಿ ಪೀಠ



