HomeGadag Newsವಿದ್ಯುತ್ ಖಾಸಗೀಕರಣ ವಿರೋಧಿಸಿ ಗರ್ಜನೆ: ಟಾಟಾ ಪವರ್‌ಗೆ ಪರವಾನಗಿ ನೀಡದಂತೆ ಒತ್ತಾಯ

ವಿದ್ಯುತ್ ಖಾಸಗೀಕರಣ ವಿರೋಧಿಸಿ ಗರ್ಜನೆ: ಟಾಟಾ ಪವರ್‌ಗೆ ಪರವಾನಗಿ ನೀಡದಂತೆ ಒತ್ತಾಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಯಾವುದೇ ಕ್ರಮವೂ ರೈತರು, ವಿದ್ಯುತ್ ಬಳಕೆದಾರರು ಹಾಗೂ ವಿದ್ಯುತ್ ವಲಯದ ನೌಕರರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಸಾರ್ವಜನಿಕ ಆಸ್ತಿಯನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸುವಂತಾಗಿದೆ ಎಂದು ಗದಗ ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ ಕಲ್ಯಾಣಶೆಟ್ಟಿ ಹೇಳಿದರು.

ಪಟ್ಟಣದ ಹೆಸ್ಕಾಂ ಉಪವಿಭಾಗ ಕಚೇರಿ ಆವರಣದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡದಂತೆ ಹಾಗೂ ವಿದ್ಯುತ್ ಕ್ಷೇತ್ರ ಖಾಸಗೀಕರಣವನ್ನು ವಿರೋಧಿಸಿ ರೈತರು, ಬಳಕೆದಾರರು ಮತ್ತು ಹೆಸ್ಕಾಂ ನೌಕರರಿಗಾಗಿ ಆಯೋಜಿಸಿದ್ದ ಆಕ್ಷೇಪಣಾ ಅರ್ಜಿ ಸಲ್ಲಿಕೆ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಸ್ಕಾಂ ಸಂಸ್ಥೆಯು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಿದ್ಯುತ್ ಕಂಬಗಳು, ಉಪಕೇಂದ್ರಗಳು ಹಾಗೂ ಇತರೆ ಮೂಲಸೌಕರ್ಯಗಳನ್ನು ಖಾಸಗಿ ಕಂಪನಿಗಳ ಬಳಕೆಗೆ ನೀಡುವುದು ಸರಿಯಲ್ಲ. ಖಾಸಗೀಕರಣ ಜಾರಿಯಾದರೆ ರೈತರಿಗೆ ದೊರೆಯುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಕಡ್ಡಾಯವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸರ್ಕಾರದ ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಗಂಗಾ ಕಲ್ಯಾಣ ಸೇರಿದಂತೆ ಹಲವು ಜನಪರ ಯೋಜನೆಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಜೊತೆಗೆ ಕೈಮಗ್ಗ ನೇಕಾರರು ಹಾಗೂ ಕಾಫಿ ಬೆಳೆಗಾರರಿಗೆ ನೀಡಲಾಗುತ್ತಿರುವ ಸಬ್ಸಿಡಿ ಸೌಲಭ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದರು.

ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಟಾಕಪ್ಪ ಸಾತಪುತೆ ಮಾತನಾಡಿ, ಖಾಸಗಿ ಕಂಪನಿಗಳ ಪ್ರವೇಶದಿಂದ ಕೆಲವು ರಾಜ್ಯಗಳಲ್ಲಿ ರೈತರು ಮತ್ತು ಗ್ರಾಹಕರು ಸಂಕಷ್ಟ ಅನುಭವಿಸಿರುವ ಉದಾಹರಣೆಗಳಿವೆ. ಆದ್ದರಿಂದ ಜೂನ್ 23ರೊಳಗೆ ಆಕ್ಷೇಪಣಾ ಪತ್ರ ಸಲ್ಲಿಕೆ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುರೇಶ ಸ್ವಾದಿ, ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮುಕ್ತಾರ ಅಹ್ಮದ್ ಗದಗ, ಬಾಬಣ್ಣ ಉಮಚಗಿ, ಬಸವರಾಜ ಸೂರಣಗಿ ಹಾಗೂ ಬಸವರಾಜ ಟೋಕಾಳಿ ಮಾತನಾಡಿ, ಯಾವುದೇ ಕಾರಣಕ್ಕೂ ಟಾಟಾ ಪವರ್ ಕಂಪನಿಗೆ ವಿತರಣಾ ಪರವಾನಗಿ ನೀಡಬಾರದು. ಖಾಸಗೀಕರಣದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಂಜನೇಪ್ಪ ಬಿ., ಶಾಖಾಧಿಕಾರಿಗಳಾದ ಕಿರಣಕುಮಾರ ಪಮ್ಮಾರ, ರಘುಪತಿ ನಾಯಕ, ಇರನಗೌಡ, ಬಸವರಾಜ, ವಿಜಯ, ಸಂತೋಷ ನಾಯಕ ಸೇರಿದಂತೆ ಅನೇಕ ರೈತರು, ಲೈನ್‌ಮನ್‌ಗಳು ಹಾಗೂ ವಿದ್ಯುತ್ ಬಳಕೆದಾರರು ಭಾಗವಹಿಸಿದ್ದರು.

“ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ರೈತರಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸೇರಿದಂತೆ ಹಲವು ಜನಪರ ಯೋಜನೆಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಎಲ್ಲರೂ ಖಾಸಗೀಕರಣವನ್ನು ವಿರೋಧಿಸಬೇಕು.”

ರಾಜೇಶ ಕಲ್ಯಾಣಶೆಟ್ಟಿ

ಕಾರ್ಯನಿರ್ವಾಹಕ ಇಂಜಿನಿಯರ್, ಗದಗ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!