ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೃದ್ಧ ಮಳೆ ಮತ್ತು ಉತ್ತಮ ಬೆಳೆಗಾಗಿ ಲಕ್ಷ್ಮೇಶ್ವರದ ರೈತ ಸಮುದಾಯ ಮಂಗಳವಾರ ಮಂಜಲಾಪುರದ ಕೊಲ್ಲಾರೆಮ್ಮ ದೇವಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಿ ವರುಣ ದೇವನ ಕೃಪೆ ಕೋರಿತು.
ಪಟ್ಟಣದ ಸೊಪ್ಪಿನಕೇರಿ ಓಣಿಯ ರೈತರು ಜಂತ್ಲಿ ಬಸವೇಶ್ವರ ದೇವಸ್ಥಾನದಿಂದ ಭಜನೆ ಹಾಡುತ್ತಾ ಕೊಲ್ಲಾರೆಮ್ಮ ದೇವಿಯ ಸನ್ನಿಧಿಗೆ ತೆರಳಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ದೇವಿಯ ಪ್ರಾಂಗಣದ ಮುಂಭಾಗದಲ್ಲಿ ಹೊಂಡ ನಿರ್ಮಿಸಿ ಅದರಲ್ಲಿ ನೀರು ತುಂಬಿಸಿ, ವರುಣ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಅಶ್ವತ್ಥ ಕಟ್ಟೆಗೂ ಪೂಜೆ ನೆರವೇರಿಸಲಾಯಿತು.
ಮಳೆ ಸಮೃದ್ಧಿಯಾಗಿ ಸುರಿದು ಕೃಷಿ ಚಟುವಟಿಕೆಗಳು ಯಶಸ್ವಿಯಾಗಲಿ ಹಾಗೂ ರೈತರ ಬದುಕು ಹಸನಾಗಲಿ ಎಂಬ ಆಶಯದೊಂದಿಗೆ ರೈತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪೂಜಾರಿಯ ಮೂಲಕ ದೇವಿಯ ವಾಣಿ ತಿಳಿಸಲಾಯಿತು. ಸಂಪ್ರದಾಯದಂತೆ ದೇವಿಯ ವಾಣಿಯ ಬಳಿಕ ಮೂರು ದಿನಗಳೊಳಗೆ ಮಳೆಯಾಗುವ ನಂಬಿಕೆ ರೈತ ಸಮುದಾಯದಲ್ಲಿದೆ.
ಹಿರಿಯರ ಕಾಲದಿಂದಲೂ ಮಳೆಗಾಗಿ ಕೊಲ್ಲಾರೆಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ನಡೆದುಬಂದಿದ್ದು, ಐದು ಮಂಗಳವಾರಗಳ ವ್ರತಾಚರಣೆಯನ್ನೂ ರೈತರು ಪಾಲಿಸಿಕೊಂಡು ಬರುತ್ತಿದ್ದಾರೆ. ದೇವಿಯ ವಾಣಿಯಂತೆ ಮಳೆಯಾದ ಬಳಿಕ ರೈತರು ಒಟ್ಟಾಗಿ ಸೇರಿ ಗೋದಿ ಹುಗ್ಗಿ, ಜೋಳದ ಕಿಚಡಿ ಹಾಗೂ ಅನ್ನಪ್ರಸಾದ ಸಿದ್ಧಪಡಿಸಿ ಸಂಭ್ರಮದಿಂದ ಪೂಜೆ ನೆರವೇರಿಸುತ್ತಾರೆ.
ದೇವಿಯ ವಾಣಿ ಎಂದಿಗೂ ಸುಳ್ಳಾಗಿಲ್ಲ ಎಂಬ ನಂಬಿಕೆಯಿಂದ ರೈತರು ಈ ಸಂಪ್ರದಾಯವನ್ನು ಶ್ರದ್ಧಾಭಕ್ತಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ಹಿರಿಯರಾದ ಭರಮಪ್ಪ ಗುಡಗೇರಿ ಹಾಗೂ ನೀಲಪ್ಪ ಕನವಳ್ಳಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನೀಲಪ್ಪ ಕನವಳ್ಳಿ, ಭರಮಪ್ಪ ಕೊಡ್ಲಿ, ಚನ್ನಪ್ಪ ಆದಿ, ಭರಮಣ್ಣ ಗುಡಗೇರಿ, ಮುದಕನಗೌಡ ಪಾಟೀಲ, ಈರಣ್ಣ ಮುಳಗುಂದ, ಸೋಮಣ್ಣ ಚಿಂಚಲಿ, ವಿರೂಪಾಕ್ಷ ಆದಿ, ಮಯೂರಗೌಡ ಪಾಟೀಲ, ಮಂಜಪ್ಪ ಮುಳಗುಂದ, ಈರಪ್ಪ ಗುಡಗೇರಿ, ರಮೇಶ್ ಹೆಬ್ಬಾಳ, ಬಸವರಾಜ ಆದಿ, ಸಿದ್ದು ರಾಚನಾಯ್ಕರ, ಶೇಖಪ್ಪ ಪುಟಾಣಿ, ಈರಣ್ಣ ಹುಳಕನವರ, ಶಂಭು ತಂಡಿಗೇರ, ಪರಶುರಾಮ ಶಿರಹಟ್ಟಿ ಸೇರಿದಂತೆ ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
“ಹಿರಿಯರ ಕಾಲದಿಂದಲೂ ಮಳೆಗಾಗಿ ಕೊಲ್ಲಾರೆಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ದೇವಿಯ ವಾಣಿಯ ಮೇಲೆ ರೈತ ಸಮುದಾಯಕ್ಕೆ ಅಪಾರ ನಂಬಿಕೆ ಇದೆ.”
ಭರಮಪ್ಪ ಗುಡಗೇರಿ ಹಾಗೂ ನೀಲಪ್ಪ ಕನವಳ್ಳಿ



