ಕುಣಿಗಲ್/ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೆ ದುಃಖದ ಸುದ್ದಿ ಎದುರಾಗಿದೆ. ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ಗೀತಾ ಒಡೆಯರ್ (73) ಅವರು ದೀರ್ಘಕಾಲದ ಅನಾರೋಗ್ಯದ ಬಳಿಕ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಗೀತಾ ಒಡೆಯರ್ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಎರಡು ತಿಂಗಳುಗಳಿಂದ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆ ಕುಟುಂಬ ಸದಸ್ಯರು ನಿರಂತರ ವೈದ್ಯಕೀಯ ಆರೈಕೆ ಒದಗಿಸಿದ್ದರು. ಆದಾಗ್ಯೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಗೀತಾ ಒಡೆಯರ್ ಅವರು ಮಲ್ಟಿಪಲ್ ಮೈಲೋಮಾ ಎಂಬ ರಕ್ತ ಸಂಬಂಧಿ ಕ್ಯಾನ್ಸರ್ ಹಾಗೂ ಜಿಬಿ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅನಾರೋಗ್ಯದ ನಡುವೆಯೂ ಹೋರಾಟ ನಡೆಸಿದ ಅವರು ವಿಧಿವಶರಾಗಿರುವುದು ಕುಟುಂಬದವರಿಗೆ ಆಘಾತ ತಂದಿದೆ.
ಮೃತರ ಪಾರ್ಥಿವ ಶರೀರವನ್ನು ಕುಣಿಗಲ್ಗೆ ರವಾನಿಸಲಾಗಿದ್ದು, ಇಂದು ಸ್ವಗ್ರಾಮದಲ್ಲೇ ಅಂತ್ಯಸಂಸ್ಕಾರ ನಡೆಯಲಿದೆ. ಸಂಬಂಧಿಕರು, ಸ್ನೇಹಿತರು ಮತ್ತು ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಪವನ್ ಒಡೆಯರ್ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿದ್ದು, ‘ಗೋವಿಂದಾಯ ನಮಃ’, ‘ಗೂಗ್ಲಿ’, ‘ರಣವಿಕ್ರಮ’ ಹಾಗೂ ‘ನಟಸಾರ್ವಭೌಮ’ ಚಿತ್ರಗಳ ಮೂಲಕ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದ್ದಾರೆ. ಒಡೆಯರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳ ನಿರ್ಮಾಣದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.
ಜೂನ್ 16ರಂದು ಹಿರಿಯ ನಿರ್ಮಾಪಕ ಚಿನ್ನೇಗೌಡರ ಪತ್ನಿ ಹಾಗೂ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ ಜಯಮ್ಮ ನಿಧನರಾಗಿದ್ದರು. ಆ ಶೋಕದಿಂದ ಚಿತ್ರರಂಗ ಹೊರಬರುವ ಮುನ್ನವೇ ಪವನ್ ಒಡೆಯರ್ ತಾಯಿ ಗೀತಾ ಒಡೆಯರ್ ನಿಧನರಾಗಿರುವುದು ಸ್ಯಾಂಡಲ್ವುಡ್ಗೆ ಮತ್ತೊಂದು ಆಘಾತವಾಗಿ ಪರಿಣಮಿಸಿದೆ.



