HomeDharwadವಸತಿ ಶಾಲೆಯಲ್ಲಿ 10 ವರ್ಷದ ವಿದ್ಯಾರ್ಥಿ ಅನುಮಾನಾಸ್ಪದ ಸಾವು; ‘ಶಿಕ್ಷಕರು ಹೊಡೆದಿದ್ದರು’ ಎಂದಿದ್ದ ಬಾಲಕ

ವಸತಿ ಶಾಲೆಯಲ್ಲಿ 10 ವರ್ಷದ ವಿದ್ಯಾರ್ಥಿ ಅನುಮಾನಾಸ್ಪದ ಸಾವು; ‘ಶಿಕ್ಷಕರು ಹೊಡೆದಿದ್ದರು’ ಎಂದಿದ್ದ ಬಾಲಕ

For Dai;y Updates Join Our whatsapp Group

Spread the love

ಧಾರವಾಡ: ವಸತಿ ಶಾಲೆಯಲ್ಲಿ ಓದುತ್ತಿದ್ದ 10 ವರ್ಷದ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ರಸ್ತೆಯಲ್ಲಿರುವ ವಿದ್ಯಾಜ್ಯೋತಿ ವಸತಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಯು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೋಷಕರು ಶಾಲಾ ಆಡಳಿತದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಶಾನವಾಡ ಗ್ರಾಮದ ಆಕಾಶ್ ನೀಲಣ್ಣವರ್ (10) ಮೃತ ವಿದ್ಯಾರ್ಥಿ. ಸುಮಾರು 10 ದಿನಗಳ ಹಿಂದಷ್ಟೇ ತಂದೆ ವಸಂತ್ ಅವರು ಮಗನನ್ನು ನಾಲ್ಕನೇ ತರಗತಿಗೆ ವಸತಿ ಶಾಲೆಗೆ ಸೇರಿಸಿದ್ದರು.

ಬುಧವಾರ ಮುಂಜಾನೆ ಶಾಲಾ ಸಿಬ್ಬಂದಿ ಪೋಷಕರಿಗೆ ಕರೆ ಮಾಡಿ, ಆಕಾಶ್ ಕಾಂಪೌಂಡ್ ಮೇಲಿಂದ ಬಿದ್ದು ಗಾಯಗೊಂಡಿದ್ದು, ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬಳಿಕ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ಮುಂದಾದರೂ, ಮಾರ್ಗಮಧ್ಯೆಯೇ ಆಕಾಶ್ ಮೃತಪಟ್ಟಿದ್ದಾನೆ.

ಘಟನೆ ಕುರಿತು ಅನುಮಾನ ವ್ಯಕ್ತಪಡಿಸಿರುವ ಮೃತ ಬಾಲಕನ ತಂದೆ ವಸಂತ್, “ನಿನ್ನೆ ಮಗ ಕರೆ ಮಾಡಿ ಶಿಕ್ಷಕರು ಹೊಡೆದಿದ್ದಾರೆ ಎಂದು ಹೇಳಿದ್ದ. ಈಗ ಶಾಲೆಯವರು ಕಾಂಪೌಂಡ್ ಮೇಲಿಂದ ಬಿದ್ದಿದ್ದಾನೆ ಎನ್ನುತ್ತಿದ್ದಾರೆ. ಕಾಂಪೌಂಡ್ ಮೇಲಿಂದ ಬಿದ್ದರೆ ಸಾವಾಗುವುದಿಲ್ಲ. ಆತ ನಿಜವಾಗಿಯೂ ಕಾಂಪೌಂಡ್ ಮೇಲಿಂದ ಬಿದ್ದಿದ್ದಾನಾ, ಅಥವಾ ಶಾಲಾ ಕಟ್ಟಡದಿಂದ ಬಿದ್ದಿದ್ದಾನಾ ಎಂಬುದು ಸಿಸಿಟಿವಿ ದೃಶ್ಯ ಪರಿಶೀಲಿಸಿದ ಬಳಿಕವೇ ಗೊತ್ತಾಗಬೇಕು” ಎಂದು ಪ್ರಶ್ನಿಸಿದ್ದಾರೆ.

ಘಟನೆಯ ಹಿನ್ನೆಲೆ ಶಾಲಾ ಆಡಳಿತದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಾವಿನ ನಿಖರ ಕಾರಣ ಪತ್ತೆಹಚ್ಚುವಂತೆ ಆಗ್ರಹಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ನವಲಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ.

ವಿದ್ಯಾರ್ಥಿಯ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿರುವ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಗಳು ಹಾಗೂ ವೈದ್ಯಕೀಯ ವರದಿಗಳು ತನಿಖೆಗೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆಯಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!