ವಿಜಯಸಾಕ್ಷಿ ಸುದ್ದಿ, ಗದಗ: ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೂಲ ಆರೋಪಿಗಳನ್ನು ಪತ್ತೆಹಚ್ಚುವ ಬದಲು ವೈದ್ಯಕೀಯ ವಿದ್ಯಾರ್ಥಿಗಳನ್ನೇ ಹೊಣೆಗಾರರನ್ನಾಗಿ ಬಿಂಬಿಸುತ್ತಿರುವ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂಸಿ) ನಡೆ ಖಂಡನೀಯ ಎಂದು ಎಐಡಿಎಸ್ಓ (ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್) ಗದಗ ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಸಂಚಾಲಕಿ ಎಂ. ಶಾಂತಿ, ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮರುಪರೀಕ್ಷೆ ಘೋಷಣೆಯಾದ ಬಳಿಕ ದೇಶದಲ್ಲಿ ಹಲವಾರು ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಆತ್ಮಹತ್ಯೆ ಪ್ರಕರಣಗಳೂ ವರದಿಯಾಗಿವೆ. ಆದರೂ ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ತನ್ನ ನೈತಿಕ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳದೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲವನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಬದಲು, ಟೆಲಿಗ್ರಾಂ ನಿಷೇಧ ಸೇರಿದಂತೆ ವಿವಿಧ ಕ್ರಮಗಳ ಮೂಲಕ ವಿಷಯವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ದೂರಿದರು.
ಇದೇ ವೇಳೆ, ಕೋಚಿಂಗ್ ಮಾಫಿಯಾದ ಹಿಡಿತದಲ್ಲಿ ಸಿಲುಕಿರುವ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರ, ಇದೀಗ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಅನುಮಾನದ ದೃಷ್ಟಿ ಹರಿಸುತ್ತಿದೆ ಎಂದು ಎಐಡಿಎಸ್ಓ ಟೀಕಿಸಿದೆ.
ನೀಟ್-ಯುಜಿ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಜೆ ನೀಡಬಾರದು ಹಾಗೂ ಪರೀಕ್ಷೆಯ ಪಾವಿತ್ರ್ಯ ಕಾಪಾಡುವ ಹೆಸರಿನಲ್ಲಿ ಅವರ ಮೇಲೆ ನಿಗಾ ವಹಿಸಬೇಕು ಎಂದು ಎನ್ಎಂಸಿ ಹೊರಡಿಸಿರುವ ಸೂಚನೆ ವಿದ್ಯಾರ್ಥಿ ಸಮುದಾಯವನ್ನು ಅಪರಾಧಿಗಳಂತೆ ಕಾಣುವ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಬೃಹತ್ ಕೋಚಿಂಗ್ ಮಾಫಿಯಾದ ಕೈವಾಡವಿರುವುದು ಬಹಿರಂಗ ಸತ್ಯವಾಗಿದ್ದರೂ, ಅದರ ವಿರುದ್ಧ ಕ್ರಮ ಜರುಗಿಸುವ ಬದಲು ವೈದ್ಯಕೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಮತ್ತು ಶಿಕ್ಷಣ ಕ್ಷೇತ್ರದ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಕ್ರಮವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎನ್ಎಂಸಿ ಹೊರಡಿಸಿರುವ ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಜೊತೆಗೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಸಂಪೂರ್ಣ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಎಐಡಿಎಸ್ಓ ಆಗ್ರಹಿಸಿದೆ.
“ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಕೋಚಿಂಗ್ ಮಾಫಿಯಾದ ಕೈವಾಡವಿರುವುದು ಸ್ಪಷ್ಟವಾಗಿದ್ದರೂ, ವೈದ್ಯಕೀಯ ವಿದ್ಯಾರ್ಥಿಗಳನ್ನೇ ಅಪರಾಧಿಗಳಂತೆ ಬಿಂಬಿಸುವುದು ಅತ್ಯಂತ ಖಂಡನೀಯ. ವಿದ್ಯಾರ್ಥಿಗಳ ಮೇಲೆ ಕಣ್ಗಾವಲು ಇಡುವ ಎನ್ಎಂಸಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯ ನೈತಿಕ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊತ್ತುಕೊಳ್ಳಬೇಕು.”
– ಎಂ. ಶಾಂತಿ, ಜಿಲ್ಲಾ ಸಂಚಾಲಕಿ, ಎಐಡಿಎಸ್ಓ ಗದಗ



