ತುಮಕೂರು: ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ. ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷಕ್ಕೆ ದ್ರೋಹ ಮಾಡಿದವರನ್ನು ಜನರೂ ಕ್ಷಮಿಸುವುದಿಲ್ಲ, ಪಕ್ಷವೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪಕ್ಷ ಎನ್ನುವುದು ತಾಯಿ ಇದ್ದಂತೆ. ಆ ತಾಯಿಯ ಗೌರವಕ್ಕೆ ಧಕ್ಕೆ ತಂದರೆ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ಈ ರೀತಿಯ ಪಾಪದ ಕೆಲಸ ಮಾಡಿದವರಿಗೆ ಮನೆಯಲ್ಲಿ ಕೂಡ ನೆಮ್ಮದಿ ಸಿಗುವುದಿಲ್ಲ” ಎಂದು ಕಿಡಿಕಾರಿದರು.
“ಅಡ್ಡಮತದಾನ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಇಂತಹವರು ಜನಪ್ರತಿನಿಧಿಗಳಾಗಿ ಮುಂದುವರಿಯುವುದಕ್ಕಿಂತ ಗೌರವಯುತವಾಗಿ ರಾಜೀನಾಮೆ ನೀಡಿ ಮನೆಯಲ್ಲೇ ಇರುವುದು ಉತ್ತಮ. ಶಾಸಕರಾಗಿ ಹೊಂದಬೇಕಾದ ನಿಷ್ಠೆ ಮತ್ತು ಕರ್ತವ್ಯವನ್ನು ಮರೆತು ಮಾಡಿದ ಈ ತಪ್ಪಿಗೆ ಯಾವುದೇ ಪ್ರಾಯಶ್ಚಿತ್ತವಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಡ್ಡಮತದಾನದಿಂದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸೋಮಣ್ಣ, ನಾಯಕತ್ವದ ವಿಚಾರ ಸೇರಿದಂತೆ ಇತರೆ ಬೆಳವಣಿಗೆಗಳ ಬಗ್ಗೆ ಅಂತಿಮ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳುತ್ತದೆ ಎಂದರು.
ರಾಷ್ಟ್ರ ನಿರ್ಮಾಣದಲ್ಲಿ ಬಿಜೆಪಿಯ ಕೊಡುಗೆ ಅಪಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ವಿಶ್ವ ಮೆಚ್ಚುತ್ತಿರುವ ಸಂದರ್ಭದಲ್ಲಿ, ನಮ್ಮದೇ ಪಕ್ಷದ ಕೆಲ ಶಾಸಕರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದೆ ಅಡ್ಡಮತದಾನ ಮಾಡಿರುವುದು ದುಃಖದ ಸಂಗತಿ. ಇದು ಆಗಬಾರದಿತ್ತು. ಆದರೂ ನಡೆದಿರುವ ಈ ಬೆಳವಣಿಗೆಯನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಲಿದ್ದಾರೆ ಎಂದು ಹೇಳಿದರು.



