ಬೆಂಗಳೂರು: ಹುಲಿ ಉಗುರು ಪ್ರಕರಣದ ಬಳಿಕ ಇದೀಗ ನವಿಲು ಗರಿ ವಿವಾದ ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಜನಪ್ರಿಯ ನಟ ಕಿಶನ್ ಬಿಳಗಲಿ ಹಾಗೂ ನಟಿ ನಿವೇದಿತಾ ಗೌಡ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪ ಕೇಳಿಬಂದಿದ್ದು, ಅರಣ್ಯ ಇಲಾಖೆಗೆ ಅಧಿಕೃತ ದೂರು ಸಲ್ಲಿಕೆಯಾಗಿದೆ.
ನಟ-ನಟಿ ಜೋಡಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ರೀಲ್ಸ್ನಲ್ಲಿ ನವಿಲು ಗರಿಗಳಿಂದ ಅಲಂಕರಿಸಲಾದ ಉಡುಪು ಧರಿಸಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ನೈಜ ನವಿಲು ಗರಿಗಳನ್ನು ಬಳಸಿಕೊಂಡು ಉಡುಪು ತಯಾರಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವುದು ವನ್ಯಜೀವಿ (ಸಂರಕ್ಷಣಾ) ಕಾಯ್ದೆಯ ಗಂಭೀರ ಉಲ್ಲಂಘನೆಯಾಗಬಹುದು ಎಂದು ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವೈರಲ್ ವಿಡಿಯೋ ಮತ್ತು ಫೋಟೋಗಳ ವೈಜ್ಞಾನಿಕ ಪರಿಶೀಲನೆ ನಡೆಸಿ, ಬಳಸಿರುವ ಗರಿಗಳು ನೈಜವೋ ಅಥವಾ ಕೃತಕವೋ ಎಂಬುದನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಲಾಗಿದೆ. ನೈಜ ನವಿಲು ಗರಿಗಳಾಗಿರುವುದು ದೃಢಪಟ್ಟಲ್ಲಿ ಸಂಬಂಧಿತ ಉಡುಪುಗಳನ್ನು ವಶಕ್ಕೆ ಪಡೆದು ತನಿಖೆ ವಿಸ್ತರಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರ ಜೊತೆಗೆ ಗರಿಗಳ ಮೂಲ, ಖರೀದಿ, ಸಂಗ್ರಹಣೆ ಹಾಗೂ ಪೂರೈಕೆ ಸರಪಳಿಯ ಸಂಪೂರ್ಣ ತನಿಖೆ ನಡೆಸಬೇಕು. ನವಿಲು ಗರಿಗಳಿಗಾಗಿ ಅಕ್ರಮ ಬೇಟೆ, ಕಳ್ಳಸಾಗಣೆ ಅಥವಾ ಇತರೆ ವನ್ಯಜೀವಿ ಅಪರಾಧ ನಡೆದಿರುವ ಶಂಕೆ ಇದ್ದರೆ ವಿಶೇಷ ತನಿಖಾ ತಂಡ ರಚಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಸದ್ಯ ದೂರು ಅರಣ್ಯ ಇಲಾಖೆಯ ಗಮನಕ್ಕೆ ಬಂದಿದ್ದು, ಪ್ರಾಥಮಿಕ ಹಂತದ ಪರಿಶೀಲನೆ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.



