HomePolitics Newsಬಿಡದಿ ಭೂ ವ್ಯವಹಾರ ಕುರಿತು ಕುಮಾರಸ್ವಾಮಿ ಪ್ರಸ್ತಾಪ: ವರದಿ ಪರಿಶೀಲಿಸಿ ಬಳಿಕ ಅಭಿಪ್ರಾಯ ತಿಳಿಸುತ್ತೇನೆ ಎಂದ...

ಬಿಡದಿ ಭೂ ವ್ಯವಹಾರ ಕುರಿತು ಕುಮಾರಸ್ವಾಮಿ ಪ್ರಸ್ತಾಪ: ವರದಿ ಪರಿಶೀಲಿಸಿ ಬಳಿಕ ಅಭಿಪ್ರಾಯ ತಿಳಿಸುತ್ತೇನೆ ಎಂದ ಎಚ್.ಕೆ. ಪಾಟೀಲ್

For Dai;y Updates Join Our whatsapp Group

Spread the love

ಬೆಂಗಳೂರು: ಬಿಡದಿ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಸ್ತಾಪಿಸಿರುವ ಸತ್ಯಶೋಧನಾ ಸಮಿತಿ ವರದಿ ಕುರಿತು ಸಚಿವ ಎಚ್.ಕೆ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ವರದಿಯನ್ನು ಮತ್ತೊಮ್ಮೆ ಪರಿಶೀಲಿಸಿದ ಬಳಿಕವೇ ತಮ್ಮ ಅಭಿಪ್ರಾಯವನ್ನು ತಿಳಿಸುವುದಾಗಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಯಾವ ಸತ್ಯಶೋಧನಾ ಸಮಿತಿಯ ವರದಿಯನ್ನು ಉಲ್ಲೇಖಿಸಿದ್ದಾರೆ ಎಂಬುದು ನನಗೆ ಈಗ ಸ್ಪಷ್ಟವಾಗಿಲ್ಲ. ನನ್ನ ನೆನಪನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು.

ನಾನು ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC) ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಎಲ್ಲ ಸದಸ್ಯರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದೆ. ಈಗಲ್ಟನ್, ಖೋಡೆ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು. ಅವರು ಇದೇ ವರದಿಯ ಬಗ್ಗೆ ಹೇಳಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ ವಿಚಾರಕ್ಕೂ ಎಚ್.ಕೆ. ಪಾಟೀಲ್ ಸ್ಪಷ್ಟನೆ ನೀಡಿದರು. ಪರಮೇಶ್ವರ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಬಳಿಕ ನಾನು ಅವರನ್ನು ಭೇಟಿ ಮಾಡಲು ಬರುತ್ತೇನೆ ಎಂದು ದೂರವಾಣಿ ಮೂಲಕ ತಿಳಿಸಿದ್ದೆ. ಆದರೆ ಅವರೇ ‘ನಾನೇ ಬರುತ್ತೇನೆ’ ಎಂದು ಹೇಳಿ ನನ್ನನ್ನು ಭೇಟಿ ಮಾಡಿದರು.

ನಾವು ಸ್ನೇಹಿತರೆಲ್ಲ ಸೇರಿ ಆತ್ಮೀಯವಾಗಿ ಮಾತುಕತೆ ನಡೆಸಿದೆವು. ನಮ್ಮ ಉತ್ತರ ಕರ್ನಾಟಕ ಭಾಗದ ಕೆಲ ನಾಯಕರು ಅವರಿಗೆ ಸನ್ಮಾನ ಮಾಡಿದರು. ಬಳಿಕ ಚಹಾ ಕುಡಿಯುತ್ತಾ, ಉಪ್ಪಿಟ್ಟು ಸೇವಿಸುತ್ತಾ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ನಮ್ಮ ಸ್ನೇಹಿತರೊಬ್ಬರು ಉಪ ಮುಖ್ಯಮಂತ್ರಿಯಾಗಿರುವುದು ಸಂತಸದ ವಿಚಾರ ಎಂದು ಹೇಳಿದರು.

ಸಚಿವ ಸ್ಥಾನ ಸಿಗದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಆದರೆ ಅದಕ್ಕಾಗಿ ಕಾಂಗ್ರೆಸ್ ನಾಯಕರ ಬಗ್ಗೆ ಅಸಮಾಧಾನ ಹೊಂದುವ ಪ್ರಶ್ನೆಯೇ ಇಲ್ಲ. ಸಚಿವ ಸ್ಥಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮುಖ್ಯಮಂತ್ರಿ ಅಥವಾ ಎಐಸಿಸಿ ಅಧ್ಯಕ್ಷರನ್ನು ಕೇಳಬೇಕು ಎಂದರು.

ಎಐಸಿಸಿ ಅಧ್ಯಕ್ಷರೊಂದಿಗೆ ತಮ್ಮ ಸಂಬಂಧ ಹಲವು ದಶಕಗಳ ಹಿಂದಿನಿಂದಲೂ ಇದೆ ಎಂದು ತಿಳಿಸಿದ ಎಚ್.ಕೆ. ಪಾಟೀಲ್, ನಮ್ಮ ತಂದೆಯವರ ಕಾಲದಿಂದಲೂ ಉತ್ತಮ ಸಂಬಂಧವಿದೆ. ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ನಾನು ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದೆ.

ಎಸ್ಎಂ ಕೃಷ್ಣ ಅವರ ಸಚಿವ ಸಂಪುಟದಲ್ಲಿ ಅವರು ಗೃಹ ಸಚಿವರಾಗಿದ್ದರೆ, ನಾನು ಜಲಸಂಪನ್ಮೂಲ ಸಚಿವನಾಗಿದ್ದೆ. ಬಳಿಕ ಆರ್‌ಡಿಪಿಆರ್ ಸಚಿವನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಸರ್ಕಾರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಮ್ಮ ನಡುವೆ ಸಾಮಾಜಿಕ ಮತ್ತು ವೈಯಕ್ತಿಕ ಸಂಬಂಧವೂ ಗಟ್ಟಿಯಾಗಿದೆ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!