ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಬಾರದು ಹಾಗೂ ಟಾಟಾ ಕಂಪನಿಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಲಕ್ಷ್ಮೇಶ್ವರ ತಾಲೂಕು ಘಟಕದ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಎಂ. ಧನಂಜಯ ಅವರಿಗೆ ಮನವಿ ಸಲ್ಲಿಸಿದರು.
ವಿದ್ಯುತ್ ವಿತರಣಾ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳು ಪ್ರವೇಶಿಸಿದರೆ ರೈತರ ಪಂಪ್‌ಸೆಟ್‌ಗಳಿಗೆ ಹಾಗೂ ಗೃಹ ಬಳಕೆದಾರರಿಗೆ ತೊಂದರೆಯಾಗಲಿದೆ. ಜೊತೆಗೆ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ವಿದ್ಯುತ್ ಇಲಾಖೆಯನ್ನು ಖಾಸಗಿಯವರಿಗೆ ವಹಿಸಲು ಯಾವುದೇ ಪರವಾನಿಗೆ ನೀಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈಗಾಗಲೇ ಕೆಲವು ರಾಜ್ಯಗಳಲ್ಲಿ ಖಾಸಗಿ ಕಂಪನಿಗಳು ವಿದ್ಯುತ್ ಕ್ಷೇತ್ರಕ್ಕೆ ಪ್ರವೇಶಿಸಿದ ಪರಿಣಾಮ ರೈತರು ಹಾಗೂ ಸಾಮಾನ್ಯ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೆಸ್ಕಾಂನ ಆರ್ಥಿಕ ಸ್ಥಿರತೆ, ವಿದ್ಯುತ್ ಕಾರ್ಮಿಕರ ಹಿತಾಸಕ್ತಿ ಹಾಗೂ ಗ್ರಾಮೀಣ ಗ್ರಾಹಕರ, ವಿಶೇಷವಾಗಿ ರೈತರ ಹಿತದೃಷ್ಟಿಯಿಂದ ಖಾಸಗಿ ವಿತರಣಾ ಪರವಾನಗಿ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಲಾಯಿತು.
ಒಂದು ವೇಳೆ ವಿದ್ಯುತ್ ಖಾಸಗೀಕರಣಕ್ಕೆ ಮುಂದಾದರೆ ರಾಜ್ಯಾದ್ಯಂತ ಬಂದ್ ಹಾಗೂ ಬಾರಕೋಲು ಚಳವಳಿ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಕಳ್ಳಿಹಾಳ, ಮಂಜುನಾಥ ಅಣ್ಣಿಗೇರಿ ಸೇರಿದಂತೆ ರಾಮಣ್ಣ ಕಾಶಿಕೋವಿ, ಶಿವಾನಂದ ಲಿಂಗಶೆಟ್ಟಿ, ಮಂಜುನಾಥ ಹಾವಳಕೇರಿ, ಮುರುಗೇಶ ಬಳಿಗಾರ, ಶಂಭಣ್ಣ ಬಳಿಗಾರ, ಸಿದ್ಧಲಿಂಗಪ್ಪ ಕಳ್ಳಿಹಾಳ, ಪ್ರಕಾಶ ಬಡಿಗೇರ, ಖಾದರ್‌ಸಾಬ್ ರಿತ್ತಿ, ಶಿವಪ್ಪ ಶಿವಸಿಂಪಿಗೇರ, ದಲಾವರ್‌ಸಾಬ್ ತಬ್ಬಲ, ಫಕ್ಕೀರೇಶ ಶೀರನಹಳ್ಳಿ, ಕುಮಾರ ಕರಡಿಕೊಪ್ಪ ಹಾಗೂ ರಮೇಶ ಕಾಶಿಕೋವಿ ಉಪಸ್ಥಿತರಿದ್ದರು.



