ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದ ಮಂತ್ರಿಮಂಡಲದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ದೊರಕಲಿ ಎಂದು ಆಶಿಸಿ ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಸೋಮೇಶ್ವರನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಚನ್ನಪ್ಪ ಜಗಲಿ, ಎಚ್.ಕೆ. ಪಾಟೀಲ ಅವರು ಗದಗ ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ಅನುಭವಿ ಹಾಗೂ ಕಳಂಕರಹಿತ ರಾಜಕಾರಣಿಯಾಗಿದ್ದಾರೆ ಎಂದು ಹೇಳಿದರು.
ಪ್ರವಾಸೋದ್ಯಮ ಸಚಿವರಾಗಿದ್ದ ಅವಧಿಯಲ್ಲಿ ಲಕ್ಷ್ಮೇಶ್ವರದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದ ಉತ್ತರ ಮಹಾದ್ವಾರದ ಮರುನಿರ್ಮಾಣಕ್ಕೆ ₹2.50 ಕೋಟಿ ಅನುದಾನ ಒದಗಿಸಿ ದೇವಸ್ಥಾನದ ಅಭಿವೃದ್ಧಿಗೆ ನೆರವಾಗಿದ್ದರು. ಅವರ ಅನುಭವ ಮತ್ತು ಸೇವೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬ ಆಶಯದಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ, ಸುರೇಶ ರಾಚನಾಯ್ಕರ, ವಿರುಪಾಕ್ಷ ಆದಿ, ಬಸವರಾಜ ಮೆಣಸಿನಕಾಯಿ, ಮಯೂರಗೌಡ ಪಾಟೀಲ, ಬಂಗಾರೆಪ್ಪ ಮುಳಗುಂದ, ಡಿ.ವಿ. ಹಿರೇಮಠ, ನಂದೀಶ ಬಂಡಿವಾಡ, ಕಾಶಪ್ಪ ಉಮಚಗಿ, ಯಲ್ಲಪ್ಪಗೌಡ ಪಾಟೀಲ, ಬಸಣ್ಣ ಉಮಚಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



