ಬೆಂಗಳೂರು: ಕೆ.ಆರ್.ಪುರ ತ್ರಿವಳಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕೆನೆತ್ನನ್ನು ಕೆ.ಆರ್.ಪುರ ಪೊಲೀಸರು ಪುದುಚೇರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಬೆಂಗಳೂರಿಗೆ ಕರೆತಂದು ಬಂಧನದ ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಬಂಧಿತಳಾಗಿರುವ ಆರೋಪಿ ಶ್ವೇತಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಮತ್ತೊಂದೆಡೆ ತಲೆಮರೆಸಿಕೊಂಡಿದ್ದ ಕೆನೆತ್ ಪತ್ತೆಗಾಗಿ ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದ ಪೊಲೀಸರು ಹಲವು ರಾಜ್ಯಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರು.
ತನಿಖೆ ವೇಳೆ ಶ್ವೇತಾ ಮತ್ತು ಕೆನೆತ್ ಇಬ್ಬರೂ ಬೆಂಗಳೂರಿನಿಂದ ಬೈಕ್ನಲ್ಲಿ ಪುದುಚೇರಿಗೆ ತೆರಳಿರುವುದು ಬೆಳಕಿಗೆ ಬಂದಿದೆ. ಕೆನೆತ್, ಶ್ವೇತಾಳನ್ನು ಪುದುಚೇರಿವರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯೇ ಇಬ್ಬರ ನಡುವೆ ವಾಗ್ವಾದ ನಡೆದಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ತ್ರಿವಳಿ ಕೊಲೆ ಪ್ರಕರಣದ ವಿಚಾರದಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗಲಾಟೆಯ ಬಳಿಕ ಇಬ್ಬರೂ ಪ್ರತ್ಯೇಕವಾಗಿದ್ದು, ಕೆನೆತ್ ಶ್ವೇತಾಳನ್ನು ಪುದುಚೇರಿಯಲ್ಲೇ ಬಿಟ್ಟು ತೆರಳಿದ್ದಾನೆ. ನಂತರ ಶ್ವೇತಾ ಪುದುಚೇರಿ ರೈಲು ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು. ಅಲ್ಲಿಂದ ಬೇರೆಡೆಗೆ ಪರಾರಿಯಾಗಲು ಆಕೆ ಸಂಚು ರೂಪಿಸಿದ್ದಳೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.
ಕೆನೆತ್ ಪತ್ತೆಗಾಗಿ ಕೆ.ಆರ್.ಪುರ ಪೊಲೀಸರು ತಿರುಚಿ, ವೇಲಾಂಕಣಿ, ಚೆನ್ನೈ ಹಾಗೂ ಕೊಯಂಬತ್ತೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಹಲವು ಸ್ಥಳಗಳಲ್ಲಿ ಸಂಚರಿಸಿದ್ದ ಕೆನೆತ್ ಕೊನೆಗೆ ಪುದುಚೇರಿಗೆ ತಲುಪಿರುವುದು ತನಿಖೆಯಿಂದ ಗೊತ್ತಾಗಿದೆ. ಆತನ ಚಲನವಲನವನ್ನು ಆಧರಿಸಿ ಎರಡು ಪೊಲೀಸ್ ತಂಡಗಳು ನಿರಂತರವಾಗಿ ಬೆನ್ನುಹತ್ತಿ, ಕಳೆದ ರಾತ್ರಿ ಪುದುಚೇರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿವೆ.
ಬಂಧಿತ ಕೆನೆತ್ನನ್ನು ಇಂದು ಕೆ.ಆರ್.ಪುರ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಬಂಧನದ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.