ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಎಂಟು ತಿಂಗಳ ಕಂದಮ್ಮ ಎಲ್ಇಡಿ ಬಲ್ಬ್ ನುಂಗಿದ ಅಪರೂಪದ ಘಟನೆ ನಡೆದಿದ್ದು, ವೈದ್ಯರ ಸಮಯೋಚಿತ ಚಿಕಿತ್ಸೆಯಿಂದ ಮಗುವಿನ ಜೀವ ಉಳಿದಿದೆ.
ಮನೆಯಲ್ಲಿದ್ದ ವೇಳೆ ಮಗು ಏಕಾಏಕಿ ವಿಪರೀತವಾಗಿ ಅಳಲು ಆರಂಭಿಸಿತ್ತು. ಮಗುವಿನ ಅಳುವಿಗೆ ಕಾರಣವೇನು ಎಂಬುದು ತಿಳಿಯದೇ ಆತಂಕಗೊಂಡ ಪೋಷಕರು ತಕ್ಷಣವೇ ಮಡಿಕೇರಿ ನಗರದ ಆಸ್ಪತ್ರೆಗೆ ಕರೆತಂದಿದ್ದರು.
ಆಸ್ಪತ್ರೆಯಲ್ಲಿ ವೈದ್ಯರು ಮಗುವಿನ ಆರೋಗ್ಯ ಪರೀಕ್ಷೆ ನಡೆಸಿದ ಬಳಿಕ ಎಕ್ಸ್ರೇ ಮಾಡಿಸಿದಾಗ, ಗಂಟಲು ಭಾಗದಲ್ಲಿ ಲೋಹದ ವಸ್ತುವೊಂದು ಸಿಲುಕಿರುವುದು ಪತ್ತೆಯಾಯಿತು. ಆರಂಭದಲ್ಲಿ ಮಗು ಪಿನ್ ಅಥವಾ ಬೇರೆ ಯಾವುದೇ ಲೋಹದ ವಸ್ತು ನುಂಗಿರಬಹುದೆಂದು ವೈದ್ಯರು ಶಂಕಿಸಿದ್ದರು.
ಬಳಿಕ ಲ್ಯಾರಿಂಗೊಸ್ಕೋಪ್ ಪರೀಕ್ಷೆ ನಡೆಸಿದಾಗ, ಮಗುವಿನ ಗಂಟಲಲ್ಲಿ ಎಲ್ಇಡಿ ಬಲ್ಬ್ ಸಿಲುಕಿರುವುದು ದೃಢಪಟ್ಟಿತು. ಕೂಡಲೇ ಇಎನ್ಟಿ ತಜ್ಞೆ ಡಾ. ರಾಜಶ್ರಿ ಹಾಗೂ ಮಕ್ಕಳ ತಜ್ಞ ಡಾ. ಖುಶ್ವಂತ್ ನೇತೃತ್ವದ ವೈದ್ಯರ ತಂಡ ಯಾವುದೇ ಶಸ್ತ್ರಚಿಕಿತ್ಸೆ ನಡೆಸದೆ ಸುರಕ್ಷಿತವಾಗಿ ಬಲ್ಬ್ ಅನ್ನು ಹೊರತೆಗೆದು ಮಗುವಿನ ಜೀವ ಉಳಿಸಿದರು.
ಆಟವಾಡುವ ವೇಳೆ ಮಗು ಎಲ್ಇಡಿ ಬಲ್ಬ್ ಅನ್ನು ಬಾಯಿಗೆ ಹಾಕಿಕೊಂಡು ನುಂಗಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ.
ಪೋಷಕರು ಸಮಯ ವ್ಯರ್ಥ ಮಾಡದೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಹಾಗೂ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಮಕ್ಕಳ ಕೈಗೆ ಸಣ್ಣ ವಸ್ತುಗಳು ಸಿಗದಂತೆ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.



