ಬೆಂಗಳೂರು: ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ಮತ್ತು ಪೋಸ್ಟ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಬೆಂಗಳೂರು 42ನೇ ಎಸಿಜೆಎಂ ಕೋರ್ಟ್ ಜುಲೈ 21 ರಂದು ಇಬ್ಬರೂ ಖುದ್ದಾಗಿ ಹಾಜರಾಗುವಂತೆ ಆದೇಶ ನೀಡಿದೆ.
ಪ್ರಕರಣವು ಆರ್ಎಸ್ಎಸ್ ಕಾರ್ಯಕರ್ತ ಎ. ತೇಜಸ್ ಅವರು ದಾಖಲಿಸಿದ್ದ ಖಾಸಗಿ ದೂರಿಗೆ ಸಂಬಂಧಿಸಿದೆ. ದೂರಿನಲ್ಲಿ, 2025ರ ಅಕ್ಟೋಬರ್ 14 ರಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಸದಸ್ಯರ ವಿರುದ್ಧ ಟ್ವೀಟ್ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಅದೇ ರೀತಿ, ಯೂಟ್ಯೂಬ್ ಚಾನಲ್ನಲ್ಲಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಸಹ ಸಂಘದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದರಿಂದ ಸಂಘದ ಘನತೆಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿಲ್ಲ ಎಂಬುದೂ ತಿಳಿದುಬಂದಿದೆ.
ಕೋರ್ಟ್ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಪ್ರಕರಣ ಇದೀಗ ಕಾನೂನು ಹಂತದಲ್ಲಿ ಮುಂದುವರಿದಿದೆ.



