HomeKarnataka Newsಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನರ ಹೃದಯ ಸಿಂಹಾಸನ ಶಾಶ್ವತ: ಸಿದ್ದರಾಮಯ್ಯ ಭಾವುಕ ಪೋಸ್ಟ್

ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನರ ಹೃದಯ ಸಿಂಹಾಸನ ಶಾಶ್ವತ: ಸಿದ್ದರಾಮಯ್ಯ ಭಾವುಕ ಪೋಸ್ಟ್

For Dai;y Updates Join Our whatsapp Group

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆ ಮೈಸೂರಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನರಿಂದ ದೊರೆತ ಅದ್ಧೂರಿ ಸ್ವಾಗತಕ್ಕೆ ಭಾವುಕರಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮನದಾಳದ ಸಂದೇಶ ಹಂಚಿಕೊಂಡಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ, “ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನರ ಹೃದಯ ಸಿಂಹಾಸನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬಿರುವ ಜನತಾ ಜನಾರ್ಧನರ ನಡುವಿನ ಶಾಶ್ವತ ಒಪ್ಪಂದ” ಎಂದು ಅವರು ಬರೆದುಕೊಂಡಿದ್ದಾರೆ.

ರಾಜಕೀಯ ಅಧಿಕಾರವೆಂದರೆ ಜನಸೇವೆ ಮಾಡಲು ದೊರೆಯುವ ಒಂದು ಅವಕಾಶ ಎಂದು ತಾವು ಯಾವಾಗಲೂ ನಂಬಿದ್ದೇನೆ ಎಂದು ಹೇಳಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನ ತೊರೆದ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ತೋರುತ್ತಿರುವ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ ತಮ್ಮ ಸಾರ್ವಜನಿಕ ಬದುಕಿನ ದೊಡ್ಡ ಸಂಪತ್ತಾಗಿದೆ ಎಂದು ತಿಳಿಸಿದ್ದಾರೆ.

“ಅಧಿಕಾರ ಮತ್ತು ಸಂಪತ್ತು ಕಾಲ ಬದಲಾದಂತೆ ಕಳೆದುಹೋಗಬಹುದು. ಆದರೆ ಜನರ ಪ್ರೀತಿ ಮಾತ್ರ ಶಾಶ್ವತ. ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಜನಮೆಚ್ಚುವ ರೀತಿಯಲ್ಲಿ ಸೇವೆ ಸಲ್ಲಿಸಿದ್ದೇನೆ ಎಂಬ ತೃಪ್ತಿ ಈಗ ಜನರ ಪ್ರೀತಿಯನ್ನು ಕಂಡಾಗ ಮತ್ತಷ್ಟು ಹೆಚ್ಚಾಗಿದೆ,” ಎಂದು ಅವರು ಹೇಳಿದ್ದಾರೆ.

ಮೈಸೂರಿಗೆ ಭೇಟಿ ನೀಡಿದ ವೇಳೆ ಜನಸಾಗರದಿಂದ ವ್ಯಕ್ತವಾದ ಅಭಿಮಾನ ತಮ್ಮನ್ನು ಮೂಕವಿಸ್ಮಿತರನ್ನಾಗಿಸಿದೆ ಎಂದು ಉಲ್ಲೇಖಿಸಿರುವ ಅವರು, “ನನ್ನ ಸಾರ್ವಜನಿಕ ಬದುಕಿನಲ್ಲಿ ಅಪಾರ ಜನರ ಪ್ರೀತಿಯನ್ನು ಸಂಪಾದಿಸಿದ್ದೇನೆ ಎಂಬ ಹೆಮ್ಮೆ ನನಗಿದೆ. ನಾಡಿನ ಉದ್ದಗಲಕ್ಕೂ ಯಾವುದೇ ನಿರೀಕ್ಷೆಯಿಲ್ಲದೆ ಪ್ರೀತಿ ಮತ್ತು ಅಕ್ಕರೆ ತೋರುತ್ತಿರುವ ಜನರ ಸೇವೆಗೆ ನಾನು ಸದಾ ಬದ್ಧನಾಗಿರುತ್ತೇನೆ,” ಎಂದು ಭರವಸೆ ನೀಡಿದ್ದಾರೆ.

ಇದರೊಂದಿಗೆ ಮೈಸೂರಿನಲ್ಲಿ ಅಭಿಮಾನಿಗಳು ನೀಡಿದ ಅದ್ಧೂರಿ ಸ್ವಾಗತದ ವಿಡಿಯೊವನ್ನೂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶನಿವಾರ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರಿಗೆ ಹೈವೇ ಸರ್ಕಲ್‌ನಲ್ಲಿ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಕೋರಿದ್ದರು. ಈ ಸಂದರ್ಭದಲ್ಲಿ ಶಾಸಕರಾದ ತನ್ವೀರ್ ಸೇಠ್, ಹರೀಶ್ ಗೌಡ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿಯನ್ನು ಬರಮಾಡಿಕೊಂಡಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img