ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಸಮಾಜದಲ್ಲಿರುವ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಹೋಗಲಾಡಿಸಲು ಶಿಕ್ಷಣವೇ ಪ್ರಮುಖ ಸಾಧನವಾಗಿದೆ. ಪಾಲಕರು ಮಕ್ಕಳಿಗೆ ಕೇವಲ ಅಂಕಗಳ ಶಿಕ್ಷಣವಲ್ಲ, ಸಂಸ್ಕಾರ ಮತ್ತು ಬದುಕು ಕಟ್ಟಿಕೊಡುವ ಶಿಕ್ಷಣ ನೀಡಬೇಕು ಎಂದು ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಸಮಾಜದಲ್ಲಿರುವ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಹೋಗಲಾಡಿಸಲು ಶಿಕ್ಷಣವೇ ಪ್ರಮುಖ ಸಾಧನವಾಗಿದೆ. ಪಾಲಕರು ಮಕ್ಕಳಿಗೆ ಕೇವಲ ಅಂಕಗಳ ಶಿಕ್ಷಣವಲ್ಲ, ಸಂಸ್ಕಾರ ಮತ್ತು ಬದುಕು ಕಟ್ಟಿಕೊಡುವ ಶಿಕ್ಷಣ ನೀಡಬೇಕು ಎಂದು ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯುವಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ. ಜಾತಿ-ವರ್ಗ ಭೇದರಹಿತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು. ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಶಿಕ್ಷಣ ನೀಡಬೇಕು. ಒತ್ತಾಯದ ಶಿಕ್ಷಣ ಮಕ್ಕಳಿಗೆ ಹೊರೆಯಾಗಬಾರದು ಎಂದು ಅವರು ಹೇಳಿದರು.
ಪತ್ರಕರ್ತ ಸಿ.ಕೆ. ಗಣಪ್ಪನವರ ಮಾತನಾಡಿ, ವೈಚಾರಿಕತೆ ಬೆಳೆಯಲು ಶಿಕ್ಷಣ ಅಗತ್ಯ. ವಿಜ್ಞಾನ ಯುಗದಲ್ಲಿಯೂ ಅಜ್ಞಾನ ಮತ್ತು ಮೂಢನಂಬಿಕೆಗಳು ಸಮಾಜದಲ್ಲಿ ಉಳಿದಿದ್ದು, ಅವುಗಳನ್ನು ತೊಲಗಿಸಲು ನಿರಂತರ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಪ್ರೊ. ಸತೀಶ ಪಾಸಿ, ನಿವೃತ್ತ ಶಿಕ್ಷಕ ಎಚ್.ಡಿ. ಪೂಜಾರ ಹಾಗೂ ರಂಗನಾಥ ನಾಯಕ ಮಾತನಾಡಿ, ಮಾನವ ಬಂಧುತ್ವ ವೇದಿಕೆ ರಾಜ್ಯಾದ್ಯಂತ ಮೂಢನಂಬಿಕೆ ನಿರ್ಮೂಲನೆ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡುತ್ತಿದೆ. ಸಮಾಜದಲ್ಲಿ ಸಮಾನತೆ ನೆಲೆಸಬೇಕಾದರೆ ಜಾಗೃತಿ ಅತ್ಯಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಸುರೇಶ ನಾಯಕ, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಮೈಲಾರಪ್ಪ ಕಲಕೇರಿ, ಡಿ.ಜಿ. ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮೇಘರಾಜ ನಾಯಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ನಾಯಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು.



