ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜಕ್ಕಾಗಿ ಬದುಕಿದವರನ್ನು ಸಮಾಜ ಎಂದಿಗೂ ಮರೆಯುವುದಿಲ್ಲ. ಅಂಧರು, ಅನಾಥರು ಹಾಗೂ ಸಮಾಜದ ಅಂಚಿನಲ್ಲಿದ್ದ ಮಕ್ಕಳಿಗೆ ಆಶ್ರಯ ನೀಡಿ, ಶಿಕ್ಷಣ, ಸಂಗೀತ ಮತ್ತು ಬದುಕಿನ ಭದ್ರ ಬುನಾದಿ ಹಾಕಿದ ಉಭಯ ಗುರುಗಳ ಸೇವೆ ಇಂದಿಗೂ ಸಮಾಜಕ್ಕೆ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಬುಧವಾರ ನಡೆದ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 82ನೇ ಪುಣ್ಯಾರಾಧನೆ ಹಾಗೂ ಲಿಂ. ಡಾ. ಪಂ. ಪುಟ್ಟರಾಜ ಗವಾಯಿಗಳವರ 16ನೇ ಪುಣ್ಯಾರಾಧನೆ ಮತ್ತು ಸಂಗೀತ ಸಮಾರಾಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುಟ್ಟರಾಜ ಗವಾಯಿಗಳವರು ಅಂಧರಾಗಿದ್ದರೂ ತ್ರಿಭಾಷಾ ಪಂಡಿತರಾಗಿ ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಸಂಗೀತ, ಸಾಹಿತ್ಯ, ಪುರಾಣ, ನಾಟಕ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆ ಅಪಾರವಾಗಿದೆ. 16ಕ್ಕೂ ಹೆಚ್ಚು ವಾದ್ಯಗಳನ್ನು ನುಡಿಸುವ ಅಪರೂಪದ ಪ್ರತಿಭೆ ಅವರಲ್ಲಿತ್ತು. ಅವರ ಸೇವೆಯನ್ನು ಗುರುತಿಸಿ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಅನೇಕ ಪ್ರಶಸ್ತಿಗಳನ್ನು ನೀಡಿವೆ. ಇಂತಹ ಮಹಾನ್ ಸಾಧಕರಿಗೆ ಭಾರತ ರತ್ನ ಪ್ರಶಸ್ತಿಯೇ ಸೂಕ್ತ ಗೌರವವಾಗಿತ್ತು. ಮುಂದಿನ ದಿನಗಳಲ್ಲಿ ಆ ಗೌರವ ದೊರೆಯುವ ವಿಶ್ವಾಸವಿದೆ ಎಂದು ಸಂಕನೂರ ಹೇಳಿದರು.
ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಹಣ ದುರ್ಬಳಕೆ ಕುರಿತು ಕೇಳಿಬರುತ್ತಿರುವ ಆರೋಪಗಳು ಹಿಂದೂ ಸಮಾಜಕ್ಕೆ ಕಪ್ಪುಚುಕ್ಕೆಯಂತಿವೆ. ಯಾವುದೇ ದೇವಸ್ಥಾನ ಅಥವಾ ಧಾರ್ಮಿಕ ಕೇಂದ್ರಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಜಾತ್ರೆಗಳು ಸಮಾಜದಲ್ಲಿ ಸೌಹಾರ್ದ, ಸಹಬಾಳ್ವೆ ಮತ್ತು ಜಾತ್ಯಾತೀತ ಮನೋಭಾವ ಬೆಳೆಸುವ ವೇದಿಕೆಗಳಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕೀರ್ತನ ಸಮ್ಮೇಳನದ ದಿವ್ಯ ಸಾನ್ನಿಧ್ಯವನ್ನು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಮಹಾಪೀಠದ ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಿದ್ದರು.
ಅಧ್ಯಕ್ಷತೆಯನ್ನು ಎಮ್ಮಿಗನೂರಿನ ಪೂಜ್ಯ ಶ್ರೀ ವಾಮದೇವ ಮಹಾಂತ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಚಳಗೇರಿ ಹಿರೇಮಠದ ಪೂಜ್ಯ ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.
ನೆಗಳೂರು ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹೂವಿನ ಹಡಗಲಿಯ ಪೂಜ್ಯ ಶ್ರೀ ಡಾ. ಹಿರಿಯ ಶಾಂತವೀರ ಮಹಾಸ್ವಾಮಿಗಳು, ಮೈನಹಳ್ಳಿ–ಬಿಕನಹಳ್ಳಿಯ ಪೂಜ್ಯ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನರೇಗಲ್–ಸವದತ್ತಿಯ ಪೂಜ್ಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಅಡ್ನೂರ–ರಾಜೂರ–ಗದಗ ಬ್ರಹನ್ಮಠದ ಪೂಜ್ಯ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಅಲಮೇಲದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಚಂದ್ರು ಬಾಳಿಹಳ್ಳಿಮಠ, ಮಹೇಶ ಶಾಬಾದಿಮಠ, ವಿ.ಎಸ್. ಮಾಳೇಕೊಪ್ಪಮಠ, ಹೇಮರಾಜ ಶಾಸ್ತ್ರಿ ಹಿರೇಮಠ, ಸೋಲ್ ಟ್ರಸ್ಟ್ ಸದಸ್ಯ ಪರಶುರಾಮ ಕಟ್ಟಿಮನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಈ ವೇಳೆ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವೀರೇಶ್ವರ ಪುಣ್ಯಾಶ್ರಮದ ನೂತನ ವೆಬ್‌ಸೈಟ್ ಹಾಗೂ ಲೋಗೋವನ್ನು ಲೋಕಾರ್ಪಣೆ ಮಾಡಲಾಯಿತು.
“ಸಮಾಜದ ಅಂಚಿನಲ್ಲಿದ್ದ ಅಂಧ-ಅನಾಥ ಮಕ್ಕಳಿಗೆ ಬದುಕು ಕಟ್ಟಿಕೊಟ್ಟ ಉಭಯ ಗುರುಗಳ ಸೇವೆ ಇತಿಹಾಸದಲ್ಲಿ ಅಚ್ಚಳಿಯದ ಗುರುತು. ಇಂತಹ ಮಹನೀಯರ ಆದರ್ಶವೇ ಮುಂದಿನ ಪೀಳಿಗೆಗೆ ದಾರಿದೀಪ.”
ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯ



