ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಹೆತ್ತವರನ್ನು ಗೌರವಿಸದ ಹಾಗೂ ವೃದ್ಧಾಪ್ಯದಲ್ಲಿ ಅವರನ್ನು ನಿರ್ಲಕ್ಷಿಸುವ ಮಕ್ಕಳು ತಮ್ಮ ಜೀವನದಲ್ಲಿಯೇ ಅದರ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದರು.
ಪಟ್ಟಣದ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠ ಹಾಗೂ ಅವ್ವ ಸೇವಾ ಟ್ರಸ್ಟ್ (ಹುಬ್ಬಳ್ಳಿ) ಸಂಯುಕ್ತ ಆಶ್ರಯದಲ್ಲಿ ನಡೆದ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಕಾರ್ಯಕ್ರಮ, ಮಾಸಿಕ ಶಿವಾನುಭವ ಹಾಗೂ ಅಕ್ಕನ ಬಳಗದ 50ನೇ ವರ್ಷದ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿದರು.
ತಾಯಿ ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿ ಉತ್ತಮ ಶಿಕ್ಷಣ ನೀಡಿ ಬದುಕು ಕಟ್ಟಿಕೊಡುತ್ತಾಳೆ. ಆದರೆ ಅದೇ ಮಕ್ಕಳು ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಕಡೆಗಣಿಸುತ್ತಿರುವುದು ಸಮಾಜದ ದೊಡ್ಡ ದುರಂತವಾಗಿದೆ. ವೃದ್ಧಾಶ್ರಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ತಮ್ಮ ತಾಯಿಯ ಹೆಸರಿನಲ್ಲಿ ಆರಂಭಿಸಿರುವ ಅವ್ವ ಸೇವಾ ಟ್ರಸ್ಟ್ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಸಾಧಕರಿಗೆ ಗೌರವ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಡೀ ನಾಡಿನ ತಾಯಂದಿರಿಗೆ ಗೌರವ ಸಲ್ಲಿಸುವುದೇ ಟ್ರಸ್ಟ್‌ನ ಪ್ರಮುಖ ಉದ್ದೇಶ ಎಂದು ಹೇಳಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ಮಹಿಳೆಯರ ಮೇಲಿನ ಶೋಷಣೆ, ಅನ್ಯಾಯ ಮತ್ತು ತಾರತಮ್ಯ ತಡೆಯಲು ಸರ್ಕಾರ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಗದ್ಗುರು ನಾಡೋಜ ಡಾ. ಅನ್ನದಾನೇಶ್ವರ ಶ್ರೀಗಳು ಆಶೀರ್ವಚನ ನೀಡಿ, ಬಸವರಾಜ ಹೊರಟ್ಟಿ ಅವರು ನಾಲ್ಕೂವರೆ ದಶಕಗಳಿಂದ ಶಿಕ್ಷಕರ ಕಲ್ಯಾಣ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಲ್ಲಿಸಿರುವ ಸೇವೆ ಶ್ಲಾಘನೀಯ ಎಂದರು. ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಮಠಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ಅವ್ವ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ ಹಾಗೂ ಗದಗ ಜಿಲ್ಲಾ ಸಂಚಾಲಕ ಡಾ. ಬಸವರಾಜ ಧಾರವಾಡ ಟ್ರಸ್ಟ್‌ನ ಸಮಾಜಮುಖಿ ಕಾರ್ಯಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಚನ್ನಬಸವ ದೇವರು, ಡಾ. ಬಿ.ಜಿ. ಜವಳಿ, ಕೆ.ವಿ. ಹಂಚಿನಾಳ, ಜೆ.ಟಿ. ಸಾಲಿಮಠ, ಎಸ್.ಎಂ. ಅಗಡಿ, ಶಂಕರ್ ಕೊಲ್ಮಿ, ಜಿ.ಎಸ್. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಾಗಭೂಷಣ ಹಿರೇಮಠ ಸ್ವಾಗತಿಸಿ, ದೀಪುಶ್ರೀ ಕಣವಿ ಕಾರ್ಯಕ್ರಮ ನಿರೂಪಿಸಿದರು.
“ಒಬ್ಬ ತಾಯಿ ಹತ್ತಾರು ಮಕ್ಕಳನ್ನು ಸಾಕುತ್ತಾಳೆ. ಆದರೆ ಹತ್ತಾರು ಮಕ್ಕಳು ಒಬ್ಬ ತಾಯಿಯನ್ನು ನೋಡಿಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. ಹೆತ್ತವರ ಕಣ್ಣೀರಿಗೆ ಕಾರಣವಾದವರಿಗೆ ವಿನಾಶ ತಪ್ಪದು.”
ಬಸವರಾಜ ಹೊರಟ್ಟಿ, ಸಭಾಪತಿ



