ಗದಗ: ಗದಗ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆ ಆವರಣದಲ್ಲೇ ಮೃತಪಟ್ಟ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ತಾಯಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು, ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಈ ಆರೋಪವನ್ನು ನಿರಾಕರಿಸಿದ್ದಾರೆ.
ಮೃತರನ್ನು ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದ ರತ್ನವ್ವ ಈಟಿ (45) ಎಂದು ಗುರುತಿಸಲಾಗಿದೆ. ಹೊಟ್ಟೆ ನೋವು ಹಾಗೂ ಚರ್ಮದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ಹೊಟ್ಟೆ ನೋವಿನಿಂದ ಗೋಳಾಡುತ್ತಿದ್ದರೂ ವೈದ್ಯರು ಸಮರ್ಪಕ ಚಿಕಿತ್ಸೆ ನೀಡಲಿಲ್ಲ. ಸಕಾಲಕ್ಕೆ ಚಿಕಿತ್ಸೆ ನೀಡಿದ್ದರೆ ಹಾಗೂ ಒಂದು ಇಂಜೆಕ್ಷನ್ ನೀಡಿದ್ದರೂ ನಮ್ಮ ತಾಯಿ ಬದುಕುತ್ತಿದ್ದರು ಎಂದು ಪುತ್ರರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಮಹಿಳೆ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿಲ್ಲ. ಹೃದಯಾಘಾತವೇ ಸಾವಿಗೆ ಕಾರಣ. ರೋಗಿ ಚರ್ಮದ ಕಾಯಿಲೆಗೆ ದೀರ್ಘಕಾಲದಿಂದ ಸ್ಟೀರಾಯ್ಡ್ ಔಷಧಿಗಳನ್ನು ಸೇವಿಸುತ್ತಿದ್ದರು. ಬಳಿಕ ಕುಟುಂಬಸ್ಥರೇ ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಡಿಸ್ಚಾರ್ಜ್ ಪಡೆದುಕೊಂಡಿದ್ದು, ಆಸ್ಪತ್ರೆ ಆವರಣದಿಂದ ಹೊರಡುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರ ಆರೋಪ ಮತ್ತು ಆಸ್ಪತ್ರೆ ಆಡಳಿತದ ಸ್ಪಷ್ಟನೆ ನಡುವೆ ನಿಜಾಂಶ ಏನು ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.



