ಬೆಂಗಳೂರು: ಮೂರು ದಶಕಗಳಿಗೂ ಹೆಚ್ಚು ಹಳೆಯ ಆಸ್ತಿ ನೋಂದಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊರತೆಯ ಮುದ್ರಾಂಕ ಶುಲ್ಕ ವಸೂಲಿಗಾಗಿ ಕಂದಾಯ ಇಲಾಖೆ ಹೊರಡಿಸಿದ್ದ ನೋಟಿಸ್‌ನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಅಮಾನ್ಯಗೊಳಿಸಿದೆ.
ಕಾನೂನು ನಿಗದಿಪಡಿಸಿರುವ ಅವಧಿ ಮುಗಿದ ಬಳಿಕ ಇಂತಹ ವಸೂಲಿ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಅಧಿಕಾರವಿಲ್ಲ ಎಂದು ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಳಗಾವಿಯ ಅಂಜನೇಯ ನಗರದ ನಿವಾಸಿ ರಾಜೇಶ್ವರಿ ಮುತ್ತಣ್ಣ ಬಿರಾಜ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ನ್ಯಾಯಪೀಠವು ಕರ್ನಾಟಕ ಮುದ್ರಾಂಕ ಕಾಯ್ದೆ–1957ರ ಸೆಕ್ಷನ್ 46ಎ(1) ಅನ್ನು ಉಲ್ಲೇಖಿಸಿ, ಮುದ್ರಾಂಕ ಶುಲ್ಕದ ಕೊರತೆ ವಸೂಲಿ ಮಾಡಲು ಅಧಿಕಾರಿಗಳಿಗೆ ಮಿತಿಯಿಲ್ಲದ ಅಧಿಕಾರ ಇರುವುದಿಲ್ಲ ಎಂದು ತಿಳಿಸಿದೆ. ಸಾಮಾನ್ಯವಾಗಿ ಇಂತಹ ಕ್ರಮವನ್ನು ಐದು ವರ್ಷಗಳೊಳಗೆ ಕೈಗೊಳ್ಳಬೇಕು. ವಂಚನೆ, ಪಿತೂರಿ ಅಥವಾ ಉದ್ದೇಶಪೂರ್ವಕ ತಪ್ಪು ಮಾಹಿತಿ ನೀಡಿರುವುದು ಸಾಬೀತಾದರೆ ಮಾತ್ರ ಗರಿಷ್ಠ 10 ವರ್ಷಗಳವರೆಗೆ ಅವಧಿ ವಿಸ್ತರಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ 1993ರ ವ್ಯವಹಾರಕ್ಕೆ ಸಂಬಂಧಿಸಿ 2025ರಲ್ಲಿ, ಅಂದರೆ ಸುಮಾರು 32 ವರ್ಷಗಳ ಬಳಿಕ ನೋಟಿಸ್ ಜಾರಿಗೊಳಿಸಿರುವುದು ಕಾನೂನುಬಾಹಿರವಾಗಿದ್ದು, ಕಾಲಮಿತಿಯನ್ನು ಸಂಪೂರ್ಣವಾಗಿ ಮೀರಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ನಿಗದಿತ ಅವಧಿ ಮುಗಿದ ನಂತರ ಅಧಿಕಾರಿಗಳಿಗೆ ಮುದ್ರಾಂಕ ಶುಲ್ಕ ವಸೂಲಾತಿ ಪ್ರಕ್ರಿಯೆ ಆರಂಭಿಸುವ ಅಧಿಕಾರವೇ ಇರುವುದಿಲ್ಲ. ಆದ್ದರಿಂದ, ಇಂತಹ ನೋಟಿಸ್‌ಗಳಿಗೆ ಕಾನೂನುಬದ್ಧ ಮಾನ್ಯತೆ ಇರುವುದಿಲ್ಲ ಎಂದು ಹೇಳಿದೆ.
ಅರ್ಜಿದಾರರು ಮೂಲ ವ್ಯವಹಾರದ ಪಕ್ಷಕಾರರಲ್ಲ. ಅವರು ನಂತರದ ಅವಧಿಯಲ್ಲಿ ಆಸ್ತಿಯನ್ನು ಖರೀದಿಸಿದ ಮುಗ್ಧ ಖರೀದಿದಾರರಾಗಿದ್ದಾರೆ. ಹಲವು ವರ್ಷಗಳ ಹಿಂದೆ ಮಾರಾಟಗಾರರು ಮಾಡಿರುವ ಯಾವುದೇ ತಪ್ಪಿಗೆ ಈಗಿನ ಖರೀದಿದಾರರನ್ನು ಹೊಣೆಗಾರರನ್ನಾಗಿ ಮಾಡುವುದು ನೋಂದಾಯಿತ ಆಸ್ತಿ ವ್ಯವಹಾರಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರ ವ್ಯಾಪ್ತಿ ಮೀರಿ ನೀಡಲಾಗಿದ್ದ ನೋಟಿಸ್‌ನ್ನು ರದ್ದುಗೊಳಿಸಿರುವ ಹೈಕೋರ್ಟ್, ಮುದ್ರಾಂಕ ಶುಲ್ಕ ಬಾಕಿ ಕುರಿತು ಆಸ್ತಿಯ ದಾಖಲೆಗಳಲ್ಲಿ ಮಾಡಲಾಗಿದ್ದ ನಮೂದನ್ನೂ ತೆರವುಗೊಳಿಸುವಂತೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರರ ಆಸ್ತಿಗೆ ಸಂಬಂಧಿಸಿದ ಮಾರಾಟ ಪತ್ರವು 1993ರ ಮೇ 15ರಂದು ನೋಂದಣಿಯಾಗಿತ್ತು. ಬಳಿಕ ಸುಮಾರು 32 ವರ್ಷಗಳ ನಂತರ, 2025ರ ಮಾರ್ಚ್ 20ರಂದು ಬೆಳಗಾವಿ ತಹಶೀಲ್ದಾರರು ಕೊರತೆಯ ಮುದ್ರಾಂಕ ಶುಲ್ಕ ಪಾವತಿಸುವಂತೆ ನೋಟಿಸ್ ನೀಡಿದ್ದರು. ಈ ನೋಟಿಸ್ ಆಧರಿಸಿ ಭೂ ದಾಖಲೆಗಳ ಇಲಾಖೆಯು ಆಸ್ತಿಯ ದಾಖಲೆಗಳಲ್ಲಿ ಸಂಬಂಧಿತ ನಮೂದು ಮಾಡಿತ್ತು. ಇದನ್ನು ಪ್ರಶ್ನಿಸಿ ರಾಜೇಶ್ವರಿ ಮುತ್ತಣ್ಣ ಬಿರಾಜ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.



