ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ‘ನೀರಿನ ಕೊರತೆ ಇರುವುದರಿಂದ ಬೆಳೆ ಬೆಳೆಯದಿರಿ’ ಎಂದು ನೀಡಿರುವ ಹೇಳಿಕೆ ರೈತರ ಆತ್ಮಸ್ಥೈರ್ಯ ಕುಗ್ಗಿಸುವಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರಗಾಲದ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಆಶ್ಚರ್ಯ ಮತ್ತು ನೋವು ಉಂಟುಮಾಡಿದೆ ಎಂದು ಹೇಳಿದರು.
ಪ್ರಕೃತಿ ವೈಪರೀತ್ಯದ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಧೈರ್ಯ, ಭರವಸೆ ಮತ್ತು ನೆರವು ನೀಡಬೇಕಾದ ಹೊಣೆಗಾರಿಕೆ ಹೊಂದಿದೆ. ಆದರೆ ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಹೇಳುವುದು ಸರಿಯಾದ ಸಂದೇಶವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಮುಂದಿನ 15ರಿಂದ 20 ದಿನಗಳಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ಸರಿಯಲ್ಲ. ಸರ್ಕಾರದ ಮಾತು ಕೇಳಿ ರೈತರು ಬಿತ್ತನೆ ಮಾಡದೇ ಇದ್ದರೆ ಅದರ ಹೊಣೆ ಯಾರು ಹೊರುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಶೇ.50ರಿಂದ 60ರಷ್ಟು ಮಳೆಯ ಕೊರತೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಯಾವ ರೀತಿಯ ಪೂರ್ವಸಿದ್ಧತೆ ಮಾಡಿಕೊಂಡಿದೆ ಎಂದು ಪ್ರಶ್ನಿಸಿದ ವಿಜಯೇಂದ್ರ, ಜಿಲ್ಲಾಧಿಕಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆಯೇ, ಜಾನುವಾರುಗಳ ರಕ್ಷಣೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬರಗಾಲದ ಮುನ್ಸೂಚನೆ ಹೊಸದಾಗಿ ಬಂದ ವಿಚಾರವಲ್ಲ. ಇಷ್ಟೊಂದು ದಿನ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಳ್ಳದೇ ಈಗ ರೈತರ ಮೇಲೆ ಹೊಣೆ ಹೊರಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ರೈತರ ಹಿತಾಸಕ್ತಿಗಿಂತ ಸರ್ಕಾರ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದರು.
ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವ ವಿಚಾರವನ್ನೂ ಪ್ರಸ್ತಾಪಿಸಿದ ವಿಜಯೇಂದ್ರ, ರಾಜ್ಯದ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಇಂತಹ ನಿರ್ಧಾರಗಳನ್ನು ಏಕೆ ಕೈಗೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿದರು.
ಇದೇ ವೇಳೆ, ಎಸ್‌ಐಆರ್ (Special Intensive Revision) ಪ್ರಕ್ರಿಯೆ ಹಿನ್ನೆಲೆಯಲ್ಲಿ ಆಗಸ್ಟ್ ಮಧ್ಯಭಾಗದಲ್ಲಿ ಮುಂಗಾರು ಅಧಿವೇಶನ ನಡೆಸುವುದಾಗಿ ಸರ್ಕಾರ ಹೇಳಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಶಾಸಕರು ಮನೆ ಮನೆಗೆ ತೆರಳಿ ಎಸ್‌ಐಆರ್ ಕಾರ್ಯ ನಡೆಸಬೇಕೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.



