ಬೆಂಗಳೂರು: ನಗರದ ಆರ್ಟಿ ನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಭಾಸ್ಕರ್ ದೇವಾಡಿಗ ಎಂದು ಗುರುತಿಸಲಾಗಿದ್ದು, ಅವರು ಎರಡು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೂಲತಃ ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮದವರಾಗಿದ್ದ ಭಾಸ್ಕರ್ ದೇವಾಡಿಗ ಅವರು ಬಾರ್ ಕೌನ್ಸಿಲ್ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ಅವರ ಪತ್ನಿ ಮೃತಪಟ್ಟಿದ್ದು, ಆ ಬಳಿಕ ಅವರು ಒಂಟಿಯಾಗಿಯೇ ಜೀವನ ನಡೆಸುತ್ತಿದ್ದರು.
ಘಟನೆ ನಡೆದ ಸಂದರ್ಭದಲ್ಲಿ ಮಗಳು ತವರು ಮನೆಗೆ ತೆರಳಿದ್ದ ಕಾರಣ ಭಾಸ್ಕರ್ ದೇವಾಡಿಗ ಅವರು ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಇದೇ ವೇಳೆ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಈ ಸಂಬಂಧ ಭಾಸ್ಕರ್ ದೇವಾಡಿಗ ಅವರ ತಂಗಿ ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.



