HomeGadag Newsಅಂಧ–ಅನಾಥರ ಬದುಕಿಗೆ ಬೆಳಕಾದ ಉಭಯ ಗುರುಗಳು: ಡಾ. ಅನ್ನದಾನೀಶ್ವರ ಶಿವಯೋಗಿಗಳು

ಅಂಧ–ಅನಾಥರ ಬದುಕಿಗೆ ಬೆಳಕಾದ ಉಭಯ ಗುರುಗಳು: ಡಾ. ಅನ್ನದಾನೀಶ್ವರ ಶಿವಯೋಗಿಗಳು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡನಾಡಿಗೆ ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳಂತಹ ಮಹಾನ್ ಗುರುಗಳು ದೊರೆತಿರುವುದು ನಮ್ಮೆಲ್ಲರ ಪುಣ್ಯ. ಉಭಯ ಗುರುಗಳು ಅಂಧ–ಅನಾಥರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಂಗೀತದ ಮೂಲಕ ಸಾವಿರಾರು ಮಂದಿಯ ಬದುಕಿಗೆ ಬೆಳಕು ನೀಡಿದರು ಎಂದು ಮುಂಡರಗಿಯ ಜಗದ್ಗುರು ಡಾ. ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 82ನೇ ಹಾಗೂ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 16ನೇ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಕೀರ್ತನ ಸಮ್ಮೇಳನದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಹಾನಗಲ್ ಕುಮಾರೇಶ್ವರ ಶಿವಯೋಗಿಗಳು ಗದಿಗೆಯ್ಯನವರಿಗೆ ಸಂಗೀತ ಶಿಕ್ಷಣ ನೀಡದಿದ್ದರೆ ಪಂಚಾಕ್ಷರಿ ಗವಾಯಿಗಳು ರೂಪುಗೊಳ್ಳುತ್ತಿರಲಿಲ್ಲ. ಅದೇ ರೀತಿ ಪುಟ್ಟರಾಜ ಕವಿ ಗವಾಯಿಗಳು ಅಂಧ–ಅನಾಥರಿಗೆ ಸಂಗೀತ ಶಿಕ್ಷಣ ನೀಡದಿದ್ದರೆ ಗದುಗಿನ ವೀರೇಶ್ವರ ಪುಣ್ಯಾಶ್ರಮವು ಸಂಗೀತ ಕಾಶಿಯಾಗಿ ಬೆಳೆದಿರುತ್ತಿರಲಿಲ್ಲ. ಅವರ ಆದರ್ಶ, ಕೃಪಾಶೀರ್ವಾದದಿಂದ ಆಶ್ರಮದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಉಭಯ ಗುರುಗಳು ವೀರೇಶ್ವರ ಪುಣ್ಯಾಶ್ರಮವನ್ನು ಸಂಗೀತದ ಕಾಶಿಯನ್ನಾಗಿ ರೂಪಿಸಿದ್ದಾರೆ. ಆಶ್ರಮದಲ್ಲಿ ಸಂಗೀತ, ಸಾಹಿತ್ಯ, ಕಲೆ ಹಾಗೂ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಓಂಕಾರಗಿರಿಯ ಓಂಕಾರೇಶ್ವರ ಹಿರೇಮಠದ ಫಕ್ಕೀರೇಶ್ವರ ಪಟ್ಟಾಧ್ಯಕ್ಷರು ಮಾತನಾಡಿ, ಧರ್ಮದ ಉಳಿವಿಗೆ ಹಿಂದಿನ ಮಹಾತ್ಮರು ಅಪಾರ ಶ್ರಮಿಸಿದ್ದಾರೆ. ಆಶ್ರಮವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಧರ್ಮವಾಗಿದೆ. ಕಲಾವಿದರು ತಮ್ಮ ಸಾಧನೆಯ ಮೂಲಕ ಆಶ್ರಮದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.

ಗದುಗಿನ ಆಧ್ಯಾತ್ಮ ವಿದ್ಯಾಶ್ರಮದ ಡಾ. ಶಿವಶರಣೆ ನೀಲಮ್ಮ ತಾಯಿ ಮಾತನಾಡಿ, ಒಂದು ಕಾಲದಲ್ಲಿ ಸಂಗೀತವು ಶ್ರೀಮಂತರ ಸ್ವತ್ತಾಗಿತ್ತು. ಉಭಯ ಗುರುಗಳು ಅಂಧ–ಅನಾಥರಿಗೆ ಸಂಗೀತ ಶಿಕ್ಷಣ ನೀಡಿ ಅವರ ಬದುಕಿಗೆ ಹೊಸ ದಿಕ್ಕು ತೋರಿಸಿದರು. ಸಂಗೀತದ ಮೂಲಕ ಸಮಾಜ ಸೇವೆ ಮಾಡಿದ ಅವರ ಕೊಡುಗೆ ಅಮೂಲ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಅಡ್ನೂರ ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಸಂಗಮೇಶ ಗವಾಯಿಗಳು ಸಮ್ಮುಖ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶೇಖಣ್ಣ ಗದ್ದಿಕೇರಿ, ವಿ. ಜಂಬನಗೌಡ್ರು, ವೈ. ಮೃತ್ಯುಂಜಯ, ಎಸ್.ಪಿ. ಪಂಪನಗೌಡ, ಎಸ್. ಗುರುಪಂಚಾಕ್ಷರಿ, ಬೆಂಗಳೂರಿನ ಹೇಮಾ ಮಾತಾಜಿ–ಮನೋಹರ ಗುರೂಜಿ, ಎಚ್. ನಾಗನಗೌಡರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪೂಜ್ಯ ಕಲ್ಲಯ್ಯಜ್ಜನವರು ಆಶೀರ್ವಚನ ಹಾಗೂ ಮಂಗಳಾಶಯ ಸಲ್ಲಿಸಿದರು. ಡಾವಣಗೆರೆ ಮತ್ತು ಶಿವಮೊಗ್ಗ ಶಾಖಾ ಆಶ್ರಮಗಳ ಅಂಧ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಹರ್ಲಾಪೂರದ ಸದಾನಂದ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಬಳಿಕ ನಾಡಿನ ವಿವಿಧ ಸಂಗೀತಗಾರರಿಂದ ಅಹೋರಾತ್ರಿ ಸಂಗೀತ ಸಮಾರಾಧನೆ ನಡೆಯಿತು.

“ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು ಅಂಧ–ಅನಾಥರ ಬದುಕನ್ನು ಸಂಗೀತದ ಮೂಲಕ ಬೆಳಗಿಸಿದ ಮಹಾನ್ ಸಂತರು. ಅವರ ಸೇವೆಯನ್ನು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.”

– ಜಗದ್ಗುರು ಡಾ. ಅನ್ನದಾನೀಶ್ವರ ಶಿವಯೋಗಿಗಳು, ಮುಂಡರಗಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img