ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ “ಜೀವನ ಧಾರಾ” ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ, ಅಂಧತ್ವ ಹಾಗೂ ಅಂಗವಿಕಲತೆಯಿಂದ ಬಳಲುತ್ತಿರುವ ವೀರೇಶ ಅಬ್ಬಿಗೇರಿ ಅವರಿಗೆ ಎರಡು ಸಿಟ್ಟಿಂಗ್ಗಳ ಡಯಾಲಿಸಿಸ್ ಚಿಕಿತ್ಸೆಗೆ ಅಗತ್ಯವಾದ ಆರ್ಥಿಕ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷೆ ಮಂಜುಳಾ ಅಕ್ಕಿ ಮಾತನಾಡಿ, ಸಂಕಷ್ಟದಲ್ಲಿರುವವರಿಗೆ ಸಮಯೋಚಿತ ನೆರವು ನೀಡುವುದು ಸಂಸ್ಥೆಯ ಧ್ಯೇಯವಾಗಿದೆ. ಸಮಾಜದ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಇಂತಹ ಸೇವಾ ಚಟುವಟಿಕೆಗಳನ್ನು ಮುಂದೆಯೂ ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ವೀರೇಶ ಅಬ್ಬಿಗೇರಿ ಹಾಗೂ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಪದಾಧಿಕಾರಿಗಳು ಧೈರ್ಯ ತುಂಬಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ಕ್ಲಬ್ ಸದಸ್ಯೆ ಡಾ. ಶಿಲ್ಪಾ ಧಡೂತಿ ಅವರು ಈ ಸೇವಾ ಕಾರ್ಯಕ್ಕೆ ಕೈಜೋಡಿಸಿ, ನೆರವು ನಿಜವಾದ ಫಲಾನುಭವಿಗೆ ತಲುಪುವಂತೆ ಸಹಕರಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಪೂಜಾ ಭೂಮಾ, ಜಂಟಿ ಕಾರ್ಯದರ್ಶಿ ಪುಷ್ಪಾ ಭಂಡಾರಿ, ಖಜಾಂಚಿ ವೀಣಾ ಕಾವೇರಿ, ಐಎಸ್ಒ ವಿದ್ಯಾ ಶಿವನಗುತ್ತಿ, ಸಂಪಾದಕಿ ಮೀನಾಕ್ಷಿ ಕೊರವನವರ, ಕೋಸಿಪಿಸಿಸಿ ಶಾರದಾ ಸಜ್ಜನ ಸೇರಿದಂತೆ ಕ್ಲಬ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
“ಸಂಕಷ್ಟದಲ್ಲಿರುವ ವ್ಯಕ್ತಿಗೆ ಸಮಯಕ್ಕೆ ಸಿಗುವ ನೆರವಿಗಿಂತ ದೊಡ್ಡ ಸೇವೆ ಮತ್ತೊಂದಿಲ್ಲ. ಸಮಾಜದ ದುರ್ಬಲ ವರ್ಗಗಳ ಬದುಕಿಗೆ ಆಸರೆಯಾಗುವ ಕೆಲಸಗಳನ್ನು ಇನ್ನರ್ ವೀಲ್ ಕ್ಲಬ್ ಮುಂದೆಯೂ ನಿರಂತರವಾಗಿ ಕೈಗೊಳ್ಳಲಿದೆ.”
– ಮಂಜುಳಾ ಅಕ್ಕಿ, ಅಧ್ಯಕ್ಷೆ, ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿ



