ಮಡಿಕೇರಿ: ಮಲ್ಲಳ್ಳಿ ಜಲಪಾತದಲ್ಲಿ ಸೆಲ್ಫಿ ಹುಚ್ಚು ಇಬ್ಬರು ಕಾಲೇಜು ವಿದ್ಯಾರ್ಥಿಗಳ ಜೀವವನ್ನೇ ಕಸಿದುಕೊಳ್ಳುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ. ಜಲವಿದ್ಯುತ್ ಕೇಂದ್ರದಿಂದ ಏಕಾಏಕಿ ನೀರು ಬಿಡುಗಡೆಯಾದ ಪರಿಣಾಮ ಕುಮಾರಧಾರಾ ಹೊಳೆಯ ಮಧ್ಯೆ ಸಿಲುಕಿದ್ದ ಆಂಧ್ರಪ್ರದೇಶದ ಇಬ್ಬರು ಯುವಕರನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಗ್ರಾಮಸ್ಥರು ಸಾಹಸಮಯ ಕಾರ್ಯಾಚರಣೆ ಮೂಲಕ ರಕ್ಷಿಸಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಗಣೇಶ್ ನಾಯಕ್ (21) ಮತ್ತು ಸಂತೋಷ್ ಕುಮಾರ್ (23) ಸ್ನೇಹಿತರೊಂದಿಗೆ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದರು. ಜಲಪಾತದ ಬಳಿ ಅಳವಡಿಸಿದ್ದ ಸುರಕ್ಷತಾ ತಡೆಗೋಡೆಗಳನ್ನು ಉಲ್ಲಂಘಿಸಿ ಹೊಳೆಗೆ ಇಳಿದಿದ್ದ ಅವರು ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆ ಮೇಲ್ಭಾಗದ ಜಲವಿದ್ಯುತ್ ಕೇಂದ್ರದಿಂದ ನೀರು ಬಿಡುಗಡೆ ಮಾಡಲಾಗಿದೆ.
ನೀರು ಬಿಡುವ ಮುನ್ನ ಎಚ್ಚರಿಕೆ ಸೈರನ್ ಮೊಳಗಿಸಿದ್ದರೂ ಅದನ್ನು ನಿರ್ಲಕ್ಷಿಸಿದ್ದ ಪರಿಣಾಮ ಕೆಲವೇ ಕ್ಷಣಗಳಲ್ಲಿ ನೀರಿನ ಹರಿವು ಅಪಾಯಕಾರಿಯಾಗಿ ಹೆಚ್ಚಾಗಿ ಇಬ್ಬರೂ ಹೊಳೆಯ ಮಧ್ಯದಲ್ಲಿ ಸಿಲುಕಿಕೊಂಡರು. ಜೀವ ಉಳಿಸಿಕೊಳ್ಳಲು ಮಧ್ಯದಲ್ಲಿದ್ದ ಬಂಡೆಯನ್ನು ಹಿಡಿದು ಸುಮಾರು ಒಂದು ಗಂಟೆ ಕಾಲ ನೆರವಿಗಾಗಿ ಕಾಯಬೇಕಾಯಿತು.
ವಿಷಯ ತಿಳಿದ ಸ್ಥಳೀಯರು ತಕ್ಷಣ ಜಲವಿದ್ಯುತ್ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ನೀರು ಬಿಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಬಳಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಗ್ಗಗಳ ನೆರವಿನಿಂದ ತೀವ್ರ ಹರಿವಿನ ನಡುವೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಸುರಕ್ಷಿತವಾಗಿ ಹೊರತೆಗೆದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಪವನ್ ಕುಮಾರ್, ಪಿ.ಎಸ್. ನಾಗೇಶ್, ಲತೇಶ್ ಕುಮಾರ್, ಪ್ರಶಾಂತ್ ಹಾಗೂ ವಿನಿ ಕುಮಾರ್ ಭಾಗವಹಿಸಿದ್ದರು. ಬಳಿಕ ವಿದ್ಯಾರ್ಥಿಗಳನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಆರೋಗ್ಯ ಸ್ಥಿರವಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಜಲಪಾತಗಳು, ನದಿಗಳು ಹಾಗೂ ನಿರ್ಬಂಧಿತ ಪ್ರದೇಶಗಳಲ್ಲಿ ಪ್ರವಾಸಿಗರು ಸಾಹಸ ಪ್ರದರ್ಶನ, ಸೆಲ್ಫಿ ಹಾಗೂ ಸುರಕ್ಷತಾ ನಿಯಮ ಉಲ್ಲಂಘನೆ ಮಾಡದಂತೆ ಅಧಿಕಾರಿಗಳು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ನೀರು ಬಿಡುಗಡೆಯಾಗುವ ಪ್ರದೇಶಗಳಲ್ಲಿ ಸೈರನ್ ಹಾಗೂ ಸೂಚನಾ ಫಲಕಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದೇ ಜೀವ ರಕ್ಷಣೆಗೆ ಅತ್ಯಗತ್ಯ ಎಂದು ಮನವಿ ಮಾಡಿದ್ದಾರೆ.



