ಮಡಿಕೇರಿ: ನಾಡಹಬ್ಬ ಮೈಸೂರು ದಸರಾ-2026ರ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಆನೆಗಳ ಆರೋಗ್ಯ ತಪಾಸಣೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಕೊಡಗಿನ ಮತ್ತಿಗೋಡು ಮತ್ತು ದುಬಾರೆ ಆನೆ ಶಿಬಿರಗಳಲ್ಲಿ 20ಕ್ಕೂ ಹೆಚ್ಚು ಆನೆಗಳಿಗೆ ಸಮಗ್ರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಮೊದಲ ಬಾರಿಗೆ ಹೃದಯದ ಆರೋಗ್ಯ ಪರೀಕ್ಷೆಗೆ ಇಸಿಜಿ (ECG) ತಪಾಸಣೆಯನ್ನೂ ಕಡ್ಡಾಯಗೊಳಿಸಲಾಗಿದೆ.
ಪಶುವೈದ್ಯರ ತಜ್ಞರ ತಂಡವು ಆನೆಗಳ ದೈಹಿಕ ಸಾಮರ್ಥ್ಯ, ಆರೋಗ್ಯ ಸ್ಥಿತಿ ಹಾಗೂ ರೋಗನಿರೋಧಕ ಸ್ಥಿತಿಯನ್ನು ಪರಿಶೀಲಿಸಿದ್ದು, ರಕ್ತ ಮತ್ತು ಮಲದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ರವಾನಿಸಿದೆ. ಹೆಣ್ಣಾನೆಗಳಿಗೆ ಅಲ್ಟ್ರಾಸೌಂಡ್ ಮೂಲಕ ಗರ್ಭಧಾರಣೆ ಪರೀಕ್ಷೆಯನ್ನೂ ನಡೆಸಲಾಗಿದೆ.
ದಸರಾ ಗಜಪಡೆಗೆ ಆಯ್ಕೆಯಾಗುವ ಆನೆಗಳು ಸಂಪೂರ್ಣ ಆರೋಗ್ಯವಂತರಾಗಿರುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಬಾರಿ ಹೃದಯದ ಕಾರ್ಯಕ್ಷಮತೆಯನ್ನು ಇಸಿಜಿ ಮೂಲಕ ಪರಿಶೀಲಿಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗಳ ಎಲ್ಲಾ ವರದಿಗಳು ಬಂದ ಬಳಿಕ ಅರ್ಹ ಆನೆಗಳ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸಿ ರಾಜ್ಯಮಟ್ಟದ ಆಯ್ಕೆ ಸಮಿತಿಗೆ ಸಲ್ಲಿಸಲಾಗುತ್ತದೆ.
- 2026ರ ವಿಜಯದಶಮಿ ಆಚರಣೆ ಕಳೆದ ವರ್ಷಕ್ಕಿಂತ ಸುಮಾರು 20 ದಿನ ತಡವಾಗಿ ನಡೆಯಲಿರುವುದರಿಂದ ಗಜಪಡೆ ಆಯ್ಕೆ ಪ್ರಕ್ರಿಯೆಯೂ ವಿಳಂಬವಾಗಿ ಆರಂಭವಾಗಿದೆ. ಆದರೂ ವೈದ್ಯಕೀಯ ಪರೀಕ್ಷೆ, ಆರೋಗ್ಯ ಮೌಲ್ಯಮಾಪನ ಹಾಗೂ ಅಂತಿಮ ಆಯ್ಕೆ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಪೂರ್ಣಗೊಳಿಸಿ ದಸರಾ ಮಹೋತ್ಸವಕ್ಕೆ ಗಜಪಡೆಯನ್ನು ಸಜ್ಜುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.



