HomeIndia Newsರಾಮಮಂದಿರ ದೇಣಿಗೆ ಎಣಿಕೆಗೆ ಕಠಿಣ ನಿಯಮ; ಸಾಮೂಹಿಕ ರಾಜೀನಾಮೆ ನೀಡಿದ 23 ಸಿಬ್ಬಂದಿ

ರಾಮಮಂದಿರ ದೇಣಿಗೆ ಎಣಿಕೆಗೆ ಕಠಿಣ ನಿಯಮ; ಸಾಮೂಹಿಕ ರಾಜೀನಾಮೆ ನೀಡಿದ 23 ಸಿಬ್ಬಂದಿ

For Dai;y Updates Join Our whatsapp Group

ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಾರಿಗೊಳಿಸಿರುವ ಕಠಿಣ ಸುರಕ್ಷತಾ ನಿಯಮಗಳಿಗೆ ಅಸಮಾಧಾನ ವ್ಯಕ್ತಪಡಿಸಿ, ದೇಣಿಗೆ ಎಣಿಕೆ ಕಾರ್ಯದಲ್ಲಿ ನಿಯೋಜಿತರಾಗಿದ್ದ 23 ಬ್ಯಾಂಕ್ ಸಿಬ್ಬಂದಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ಅಯೋಧ್ಯೆಯ ರಾಮಮಂದಿರಕ್ಕೆ ದೇಶ-ವಿದೇಶಗಳಿಂದ ಪ್ರತಿದಿನ ಭಾರೀ ಪ್ರಮಾಣದಲ್ಲಿ ನಗದು ಹಾಗೂ ಚಿನ್ನಾಭರಣಗಳ ರೂಪದಲ್ಲಿ ಕಾಣಿಕೆ ಹರಿದುಬರುತ್ತಿದೆ. ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಭದ್ರತೆ ಕಾಪಾಡುವ ಉದ್ದೇಶದಿಂದ ಟ್ರಸ್ಟ್ ಇತ್ತೀಚೆಗೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.

ಹೊಸ ನಿಯಮದ ಪ್ರಕಾರ, ಕಾಣಿಕೆ ಎಣಿಕೆ ಕಾರ್ಯದಲ್ಲಿ ತೊಡಗುವ ಸಿಬ್ಬಂದಿ ಯಾವುದೇ ಜೇಬುಗಳಿರುವ ಉಡುಪು ಧರಿಸುವಂತಿಲ್ಲ. ಜೇಬಿಲ್ಲದ ಬಟ್ಟೆ ಧರಿಸಿ ಮಾತ್ರ ಎಣಿಕೆ ಕೊಠಡಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.

ಇದರ ಜೊತೆಗೆ, ಎಣಿಕೆ ಕೊಠಡಿಗೆ ಪ್ರವೇಶಿಸುವ ಮೊದಲು ಮತ್ತು ಹೊರಬರುವ ವೇಳೆ ಸಿಬ್ಬಂದಿಗೆ ಪೊಲೀಸರು ಸಂಪೂರ್ಣ ತಪಾಸಣೆ ನಡೆಸುತ್ತಿದ್ದಾರೆ. ಬೆಲ್ಟ್, ಪರ್ಸ್ ಸೇರಿದಂತೆ ಯಾವುದೇ ವೈಯಕ್ತಿಕ ವಸ್ತುಗಳನ್ನು ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಸಂಪೂರ್ಣ ಎಣಿಕೆ ಪ್ರಕ್ರಿಯೆ ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳ ನಿಗಾದಲ್ಲೇ ನಡೆಯುತ್ತಿದೆ.

ರಾಮಮಂದಿರದ ದೇಣಿಗೆ ಎಣಿಕೆ ಕಾರ್ಯಕ್ಕೆ ವಿವಿಧ ಬ್ಯಾಂಕುಗಳ, ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ಹೊಸ ನಿಯಮಗಳು ಮತ್ತು ತಪಾಸಣಾ ಕ್ರಮಗಳು ತಮ್ಮ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಿವೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಇದಲ್ಲದೆ, ಹಿಂದೆ ಎರಡು ಪಾಳಿಗಳಲ್ಲಿ ನಡೆಯುತ್ತಿದ್ದ ಕೆಲಸವನ್ನು ಈಗ ಒಂದೇ ಪಾಳಿಗೆ ಸೀಮಿತಗೊಳಿಸಲಾಗಿದೆ. ಕರ್ತವ್ಯದ ಅವಧಿಯನ್ನು ಆರು ಗಂಟೆಯಿಂದ ಒಂಬತ್ತು ಗಂಟೆಗೆ ಹೆಚ್ಚಿಸಲಾಗಿದೆ. ವೇತನದಲ್ಲಿ ಕಡಿತ, ಒಂದೇ ಕೆಲಸಕ್ಕೆ ಬೇರೆಬೇರೆ ಸಂಬಳ ಹಾಗೂ ಮಾಸಿಕ ರಜೆಗಳ ಸಂಖ್ಯೆಯಲ್ಲೂ ಕಡಿತ ಮಾಡಲಾಗಿದೆ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂದಿರಕ್ಕೆ ಪ್ರತಿದಿನ ಲಕ್ಷಾಂತರ ರೂಪಾಯಿ ಕಾಣಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಹಣದ ದುರುಪಯೋಗಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದಲೇ ಈ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಪಷ್ಟಪಡಿಸಿದೆ.

ಈ ಹಿಂದೆ ದೇಣಿಗೆ ದುರುಪಯೋಗದ ಕುರಿತು ವದಂತಿಗಳು ಹರಿದಾಡಿದ್ದ ಕಾರಣ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.

ರಾಜೀನಾಮೆ ನೀಡಿರುವ ಸಿಬ್ಬಂದಿಯ ಸ್ಥಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದ್ದು, ದೇಣಿಗೆ ಎಣಿಕೆ ಕಾರ್ಯ ಎಂದಿನಂತೆ ಮುಂದುವರಿದಿದೆ.

ಭವಿಷ್ಯದಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಕೈಯಿಂದ ಹಣ ಎಣಿಸುವ ಪದ್ಧತಿಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸಿ, ಅತ್ಯಾಧುನಿಕ ನೋಟು ಎಣಿಕೆ ಯಂತ್ರಗಳು ಹಾಗೂ ಸ್ವಯಂಚಾಲಿತ ತಂತ್ರಜ್ಞಾನವನ್ನು ಅಳವಡಿಸಲು ಟ್ರಸ್ಟ್ ಯೋಜನೆ ರೂಪಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img