HomeKarnataka NewsGBA ಚುನಾವಣೆ ವಿಳಂಬ ಸರಿಯಲ್ಲ; ನ್ಯಾಯಾಲಯದ ಆದೇಶವನ್ನು ಸರ್ಕಾರ ಗೌರವಿಸಬೇಕು - ಛಲವಾದಿ ನಾರಾಯಣಸ್ವಾಮಿ

GBA ಚುನಾವಣೆ ವಿಳಂಬ ಸರಿಯಲ್ಲ; ನ್ಯಾಯಾಲಯದ ಆದೇಶವನ್ನು ಸರ್ಕಾರ ಗೌರವಿಸಬೇಕು – ಛಲವಾದಿ ನಾರಾಯಣಸ್ವಾಮಿ

For Dai;y Updates Join Our whatsapp Group

ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಗೌರವಿಸಿ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಬೇಕು ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಜನರು ಬಹಳ ದಿನಗಳಿಂದ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಕಾಯುತ್ತಿದ್ದಾರೆ. ಆದರೆ ಸೋಲಿನ ಭೀತಿಯಿಂದ ಕಾಂಗ್ರೆಸ್ ಸರ್ಕಾರ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

“ಬೆಂಗಳೂರು ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಳೆ ಬಂದರೆ ರಸ್ತೆಗಳು ಜಲಾವೃತವಾಗುತ್ತವೆ, ಜನರು ದೋಣಿಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಿಗಳು, ಕಸದ ಸಮಸ್ಯೆ ಹಾಗೂ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಇದೇ ಕಾರಣಕ್ಕೆ ಚುನಾವಣೆಯಲ್ಲಿ ಸೋಲುವ ಭಯದಿಂದ ನಗರವನ್ನು ಐದು ಭಾಗಗಳಾಗಿ ವಿಭಜಿಸಿ, ಕನಿಷ್ಠ ಒಂದೆರಡು ಪ್ರದೇಶಗಳಲ್ಲಾದರೂ ಗೆಲುವು ಸಾಧಿಸುವ ಲೆಕ್ಕಾಚಾರ ನಡೆಸಲಾಗಿದೆ” ಎಂದು ಅವರು ಟೀಕಿಸಿದರು.

“ಈಗ ಚುನಾವಣೆ ಎದುರಿಸುವುದು ಕಷ್ಟ ಎನ್ನುವುದು ಸರ್ಕಾರಕ್ಕೆ ಅರಿವಾಗಿದೆ. ಆದ್ದರಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನೆಪ ಮುಂದಿಟ್ಟು ಸುಪ್ರೀಂ ಕೋರ್ಟ್‌ಗೆ ಕಾಲಾವಕಾಶ ಕೋರಲಾಗಿದೆ” ಎಂದು ಆರೋಪಿಸಿದರು.

ಎಸ್‌ಐಆರ್ ಪ್ರಕ್ರಿಯೆ ಕುರಿತು ಮಾತನಾಡಿದ ಅವರು, “ಈ ಪ್ರಕ್ರಿಯೆಯಿಂದ ಯಾರ ಮತದಾನದ ಹಕ್ಕೂ ಕಸಿದುಕೊಳ್ಳುವುದಿಲ್ಲ. ಮತದಾರರ ಪಟ್ಟಿಯಲ್ಲಿರುವ ಮೃತರ ಹೆಸರುಗಳನ್ನು ತೆಗೆದುಹಾಕುವುದು ಹಾಗೂ ಅರ್ಹರಲ್ಲದವರ ಹೆಸರುಗಳನ್ನು ತೆರವುಗೊಳಿಸುವುದು ಅಗತ್ಯ. ಹೊರ ರಾಜ್ಯಗಳಿಂದ ಬಂದು ಅನಧಿಕೃತವಾಗಿ ಹೆಸರು ಸೇರಿಸಿಕೊಂಡಿದ್ದರೆ ಅವನ್ನೂ ಪರಿಶೀಲಿಸಲೇಬೇಕು” ಎಂದರು.

ಎಸ್‌ಐಆರ್ ವೇಳೆ ಕೆಲವರು ಗುಂಪು ಸೇರಿ ಅರ್ಜಿಗಳನ್ನು ಭರ್ತಿ ಮಾಡುತ್ತಿರುವ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಬಿಎಲ್‌ಒಗಳು ಹಾಗೂ ಬಿಎಲ್‌ಎ-2 ಅಧಿಕಾರಿಗಳು ಮನೆಮನೆಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಬೆಂಗಳೂರು ಅಭಿವೃದ್ಧಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅಭಿವೃದ್ಧಿ ಚರ್ಚೆಯ ವಿಷಯವಲ್ಲ, ಅದು ಕೆಲಸ ಮಾಡಿ ತೋರಿಸಬೇಕಾದ ಜವಾಬ್ದಾರಿ. ಕಳೆದ ಮೂರು ವರ್ಷಗಳಿಂದ ಸರ್ಕಾರ ಏನು ಮಾಡುತ್ತಿತ್ತು? ಈಗ ಮುಖ್ಯಮಂತ್ರಿ ಆಗಿರುವವರೇ ಆಗಾಗಲೂ ಬೆಂಗಳೂರಿನ ಜವಾಬ್ದಾರಿ ಹೊಂದಿದ್ದರು. ಆಗ ನಗರದ ಸಮಸ್ಯೆಗಳು ಕಾಣಲಿಲ್ಲವೇ? ಈಗ ನಾಟಕ ಮಾಡುವುದನ್ನು ಬಿಟ್ಟು ಕೆಲಸಕ್ಕೆ ಮುಂದಾಗಲಿ” ಎಂದು ವಾಗ್ದಾಳಿ ನಡೆಸಿದರು.

ಮಳೆಗಾಲದಲ್ಲಿ ನಗರದಲ್ಲಿ ನೀರು ಸರಾಗವಾಗಿ ಹರಿಯುವಂತೆ ಚರಂಡಿ ಮತ್ತು ಕಸದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು. ಇಲ್ಲವಾದರೆ ಮತ್ತೆ ಜನರು ದೋಣಿಯಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img