ಬೆಂಗಳೂರು: ‘ಕರಾವಳಿ’ ಚಿತ್ರದ ಸುತ್ತ ನಡೆಯುತ್ತಿರುವ ವಿವಾದದ ಮಧ್ಯೆ ನಟ ಪ್ರಜ್ವಲ್ ದೇವರಾಜ್ ತಮ್ಮ ಮೌನ ಮುರಿದಿದ್ದಾರೆ. ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಅವರು, ನಿಜವಾದ ಕಾರಣಗಳನ್ನು ಬಹಿರಂಗಪಡಿಸುವ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಟ್ರೇಲರ್ ಬಿಡುಗಡೆಯ ವೇಳೆ ತಮ್ಮ ಪಾತ್ರಕ್ಕೆ ಅನುಮತಿಯಿಲ್ಲದೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಲಾಗಿತ್ತು. ಇದೇ ವೇಳೆ ತಮ್ಮ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಈ ಎರಡೂ ಕಾರಣಗಳಿಂದಲೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.
ಸಿಕ್ಸ್ ಪ್ಯಾಕ್ ವಿಚಾರವನ್ನು ಮುಂದಿಟ್ಟಿರುವ ಚಿತ್ರತಂಡದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ದೈಹಿಕ ತಯಾರಿಗೂ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಾಕಿ ಹಣ ಪಾವತಿಸಿದ ತಕ್ಷಣ ಡಬ್ಬಿಂಗ್ ಮಾಡಲು ಮತ್ತು ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳಲು ತಾವು ಸಿದ್ಧವಾಗಿದ್ದೆ ಎಂದಿದ್ದಾರೆ.
ಸಂಭಾವನೆ ಪಾವತಿಯಾದ ನಂತರ ಚಿತ್ರತಂಡವೇ ತಮ್ಮ ಮ್ಯಾನೇಜರ್ಗೆ ಕರೆ ಮಾಡಿ ಡಬ್ಬಿಂಗ್ ಹಾಗೂ ಪ್ರಚಾರಕ್ಕೆ ಬರಬೇಕಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಚಿತ್ರದಿಂದ ದೂರ ಉಳಿದಿರುವುದು ತಮ್ಮ ನಿರ್ಧಾರವಲ್ಲ, ಚಿತ್ರತಂಡದ ನಿರ್ಧಾರ ಎಂದು ಪ್ರಜ್ವಲ್ ಹೇಳಿದ್ದಾರೆ.
ತಮ್ಮ ಧ್ವನಿ ಪಾತ್ರಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿರುವುದು ನೋವುಂಟು ಮಾಡಿದೆ. ಅವಕಾಶ ನೀಡದೆ ಈ ರೀತಿಯ ಹೇಳಿಕೆ ನೀಡಿರುವುದು ತಮ್ಮ ವೃತ್ತಿಪರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ವಿವಾದವನ್ನು ಇಲ್ಲಿಗೇ ಮುಕ್ತಾಯಗೊಳಿಸುವುದಾಗಿ ಘೋಷಿಸಿರುವ ಪ್ರಜ್ವಲ್ ದೇವರಾಜ್, ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳು ಚಿತ್ರದ ಪರಿಶ್ರಮವನ್ನು ಮರೆಮಾಚಬಾರದು ಎಂದು ಹೇಳಿ, ‘ಕರಾವಳಿ’ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.



