ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಕಲಾಭೂಮಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಕುಡುಕ ನನ್ಮಕ್ಳು’ ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಚಿತ್ರತಂಡ ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.
‘ತುಂಬಾ ಒಳ್ಳೆಯವರು’ ಎಂಬ ಅಡಿ ಬರಹ ಹೊಂದಿರುವ ಚಿತ್ರದ ಚಿತ್ರೀಕರಣವು ಬೆಂಗಳೂರು ನಗರ ಹಾಗೂ ಹೊರವಲಯಗಳಲ್ಲಿ ಸುಮಾರು 20 ದಿನಗಳ ಕಾಲ ನಡೆದಿದ್ದು, ಕಾಮಿಡಿ ಕಿಲಾಡಿಗಳಾದ ಚಂದ್ರಪ್ರಭ, ವಿನೋದ್ ಗೊಬ್ರಗಾಲ, ಮಿಮಿಕ್ರಿ ಗೋಪಿ, ಸಚಿನ್ ಪುರೋಹಿತ್, ಚೈತ್ರಾ ಕೊಟ್ಟೂರು ಸೇರಿದಂತೆ ಹಲವಾರು ಹಾಸ್ಯ ಕಲಾವಿದರು ನಟಿಸಿದ್ದಾರೆ.
ಚಿತ್ರಕ್ಕೆ ಆಸ್ಕರ್ ಕೃಷ್ಣ ನಿರ್ದೇಶನವಿದ್ದು, ಮಂಜು ಕವಿ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ವಿನಯ್ ಗೌಡ ಛಾಯಾಗ್ರಹಣ, ಅಯ್ಯೂರ್ ಸಂಕಲನ, ವೆಂಕಟ್ ಸಂಭಾಷಣೆ ಬರೆದಿದ್ದಾರೆ. ಚಂದ್ರಶೇಖರ ಪಿಆರ್‌ಒ ಆಗಿದ್ದು, ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ ಹಂಡಿಗಿ ಸಹಯೋಗ ನೀಡಿದ್ದಾರೆ.
ಅರುಣ ಎಲ್. ಶೆಟ್ಟಿ, ವೈಶಾಲಿ ಮುರಳೀಧರ್, ಪಲ್ಲವಿ ಅಗ್ನಿಹೋತ್ರಿ, ಬಾಬು ಎಸ್.ಎಚ್. (ತುಮಕೂರು), ರವಿ ನಾಯಕ್, ನಿಂಗರಾಜು ಬಿ., ಲೋಕೇಶ್ ಕೆ.ಎಸ್. ಹಾಗೂ ಸಿದ್ದಲಿಂಗಯ್ಯ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
25, 30, 35 ಮತ್ತು 40 ವರ್ಷದ ನಾಲ್ವರು ವ್ಯಕ್ತಿಗಳ ಬದುಕಿನ ಸುತ್ತ ಸಾಗುವ ಈ ಚಿತ್ರವು, ಮದ್ಯಪಾನದ ದುಷ್ಪರಿಣಾಮಗಳು ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಹಾಸ್ಯದ ಮೂಲಕ ಮನಮುಟ್ಟುವ ರೀತಿಯಲ್ಲಿ ಚಿತ್ರಿಸುತ್ತದೆ ಎಂದು ನಿರ್ದೇಶಕ ಆಸ್ಕರ್ ಕೃಷ್ಣ ತಿಳಿಸಿದ್ದಾರೆ.
ಚಿತ್ರವನ್ನು ದಸರಾ ಅಥವಾ ದೀಪಾವಳಿ ವೇಳೆಗೆ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.



