ಬೆಂಗಳೂರು: ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ಮಹತ್ವದ ಬದಲಾವಣೆ ಮಾಡುವ ಕುರಿತು ಚಿಂತನೆ ನಡೆದಿದೆ.
ನಾಡಗೀತೆಯಲ್ಲಿ ಜೈನ ಧರ್ಮದ ಜೊತೆಗೆ ‘ಬೌದ್ಧ ಧರ್ಮ’ದ ಹೆಸರನ್ನೂ ಸೇರಿಸಲು ಪ್ರಸ್ತಾಪಿಸಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ನೇತೃತ್ವದ ಸಮಿತಿ ಈ ಸಲಹೆ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಪ್ರಸ್ತುತ ನಾಡಗೀತೆಯಲ್ಲಿ “ಜೈನರ ಪೂಜ್ಯ ಉದ್ಯಾನ” ಎಂಬ ಸಾಲಿದೆ. ಈ ಸಾಲಿನಲ್ಲಿ ಬೌದ್ಧ ಧರ್ಮದ ಹೆಸರನ್ನೂ ಸೇರಿಸುವ ಕುರಿತು ಸಮಿತಿ ಸಲಹೆ ನೀಡಿದೆ. “ಜೈನ ಬೌದ್ಧರ ಪೂಜ್ಯ ಉದ್ಯಾನ” ಅಥವಾ “ಜೈನರುದ್ಯಾನದ ಜೊತೆಗೆ ಬೌದ್ಧರುದ್ಯಾನ” ಎಂದು ಬದಲಾವಣೆ ಮಾಡಲು ಪ್ರಸ್ತಾಪಿಸಲಾಗಿದೆ.
ಎಲ್ಲ ಧರ್ಮಗಳ ಸಮಾನತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಬೌದ್ಧ ಧರ್ಮದ ಹೆಸರನ್ನು ಸೇರಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.
ಸಮಿತಿಯ ಪ್ರಸ್ತಾಪವನ್ನು ಸರ್ಕಾರದ ಮುಂದಿಡಲಾಗಿದ್ದು, ರಾಜ್ಯ ಸರ್ಕಾರ ಒಪ್ಪಿಗೆ ನೀಡಿದರೆ ನಾಡಗೀತೆಯಲ್ಲಿ ಬದಲಾವಣೆ ಜಾರಿಯಾಗುವ ಸಾಧ್ಯತೆ ಇದೆ. ಬಳಿಕ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪರಿಷ್ಕೃತ ನಾಡಗೀತೆ ಬಳಕೆಗೆ ಬರಬಹುದು.



