ಗದಗ: ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ಜುಲೈ 12ರಂದು ಸಂಭವಿಸಿದ್ದ ಭೀಕರ ರಸ್ತೆ ಅಪಘಾತದ ಬೆಚ್ಚಿಬೀಳಿಸುವ ದೃಶ್ಯ ಇದೀಗ ಬೆಳಕಿಗೆ ಬಂದಿದೆ. ಅಪಘಾತ ಸಂಭವಿಸಿದ ಕ್ಷಣ ಎದುರುಗಡೆಯಿಂದ ಬರುತ್ತಿದ್ದ ಲಾರಿಯಲ್ಲಿ ಅಳವಡಿಸಲಾಗಿದ್ದ ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಗಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಧಾರವಾಡದಿಂದ ಬಾಗಲಕೋಟೆ ಜಿಲ್ಲೆಯ ನೀರಲಗಿ ಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಧಾರವಾಡ ಕಾರಾಗೃಹದ ವಾರ್ಡರ್ ಸಂಗಪ್ಪ ಮಜ್ಜಗಿ (41) ಅವರು ಟ್ರ್ಯಾಕ್ಟರ್ನ್ನು ಓವರ್ಟೇಕ್ ಮಾಡುವ ವೇಳೆ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಂಗಪ್ಪ ಮಜ್ಜಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರಿನೊಳಗೆ ಸಿಲುಕಿಕೊಂಡಿದ್ದ ಅವರನ್ನು ಹೊರತೆಗೆಯಲು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಹರಸಾಹಸ ಪಟ್ಟಿದ್ದರು.
ಲಾರಿಯ ಡ್ಯಾಶ್ಕ್ಯಾಮ್ನಲ್ಲಿ ಅಪಘಾತದ ಸಂಪೂರ್ಣ ದೃಶ್ಯ ಸೆರೆಯಾಗಿದ್ದು, ಟ್ರ್ಯಾಕ್ಟರ್ನ್ನು ಹಿಂದಿಕ್ಕುವ ವೇಳೆ ಕಾರು ನಿಯಂತ್ರಣ ತಪ್ಪಿ ನೇರವಾಗಿ ಲಾರಿಗೆ ಡಿಕ್ಕಿ ಹೊಡೆಯುವ ದೃಶ್ಯ ಎದೆ ಝಲ್ಲೆನಿಸುವಂತಿದೆ. ಈ ವಿಡಿಯೊ ತನಿಖೆಗೆ ಮಹತ್ವದ ಸಾಕ್ಷ್ಯವಾಗಿದ್ದು, ಅಪಘಾತದ ನಿಖರ ಕಾರಣ ಪತ್ತೆಗೆ ನೆರವಾಗುವ ಸಾಧ್ಯತೆ ಇದೆ.
ಮೃತ ಸಂಗಪ್ಪ ಮಜ್ಜಗಿ ಅವರು ಧಾರವಾಡ ಕಾರಾಗೃಹದಲ್ಲಿ ವಾರ್ಡರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಸ್ವಗ್ರಾಮ ನೀರಲಗಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪ್ರಕರಣ ನರಗುಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



