ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ದಾಖಲಾಗಿರುವ ವಿವಿಧ ದೂರುಗಳ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕದ ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಶುಕ್ರವಾರ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಸಂವಾದದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ದೂರುಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಯಾವುದೇ ವಿಳಂಬವಿಲ್ಲದೆ ತಲುಪುವಂತೆ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಉಪಲೋಕಾಯುಕ್ತರು ಆಗಸ್ಟ್ 5ರಂದು ಗದಗ ಜಿಲ್ಲೆಗೆ ಆಗಮಿಸಲಿದ್ದು, ಆಗಸ್ಟ್ 6ರಂದು ಸಾರ್ವಜನಿಕರಿಂದ ದಾಖಲಾಗಿರುವ ದೂರುಗಳ ಪರಿಶೀಲನೆ ನಡೆಸಲಿದ್ದಾರೆ. ಆಗಸ್ಟ್ 7ರಂದು ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ತಪಾಸಣೆ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಸಮಯಪಾಲನೆ, ಶಿಸ್ತು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕರಿಗೆ ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಬೇಕು. ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಅನಗತ್ಯ ವಿಳಂಬವಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ದೂರುಗಳು ಹಾಗೂ ಅವುಗಳ ವಿಲೇವಾರಿ ಕುರಿತು ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್, ಡಿವೈಎಸ್‌ಪಿ ಮಹಾಂತೇಶ ಸಜ್ಜನರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

