HomeCrime Newsಗದಗದ ₹44 ಲಕ್ಷ ಮನೆಗಳ್ಳತನ ಮಿಸ್ಟರಿ ಬಯಲು; ಮೂವರು ಅಂತರ ಜಿಲ್ಲಾ ಕಳ್ಳರ ಬಂಧನ- ಎಸ್ಪಿ...

ಗದಗದ ₹44 ಲಕ್ಷ ಮನೆಗಳ್ಳತನ ಮಿಸ್ಟರಿ ಬಯಲು; ಮೂವರು ಅಂತರ ಜಿಲ್ಲಾ ಕಳ್ಳರ ಬಂಧನ- ಎಸ್ಪಿ ರೋಹನ್ ಜಗದೀಶ್ ಮಾಹಿತಿ

ಗದಗ: ನಗರದ ಉದಯನಗರದಲ್ಲಿ ನಡೆದಿದ್ದ ಸುಮಾರು ₹44 ಲಕ್ಷ ಮೌಲ್ಯದ ಮನೆಗಳ್ಳತನ ಪ್ರಕರಣವನ್ನು ಗದಗ ನಗರ ಪೊಲೀಸರು ಭೇದಿಸಿ, ಅಂತರ ಜಿಲ್ಲಾ ಕಳ್ಳರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ₹42.73 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಾನು ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ತಿಳಿಸಿದರು.

ನಗರದ ಉದಯನಗರ 1ನೇ ಕ್ರಾಸ್‌ನ ಕ್ಲರ್ಕ್ಸ್ ಇನ್ ಹಿಂಭಾಗದಲ್ಲಿರುವ ಮಂಜುನಾಥ ತಂದೆ ಷಣ್ಮುಖಸಾ ಬಸವಾ ಅವರ ಮನೆಯಲ್ಲಿ ಮೇ 6ರಿಂದ 8ರ ನಡುವಿನ ಅವಧಿಯಲ್ಲಿ ಕಳ್ಳರು ಬೀಗ ಮುರಿದು ನುಗ್ಗಿ, 342 ಗ್ರಾಂ ಚಿನ್ನಾಭರಣ, 1,970 ಗ್ರಾಂ ಬೆಳ್ಳಿ ಸಾಮಾನು ಹಾಗೂ ₹8.50 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ರೋಹನ್ ಜಗದೀಶ್ ಹಾಗೂ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು. ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂಗಮೇಶ ವಿ. ಶಿವಯೋಗಿ, ಬೆಟಗೇರಿ ವೃತ್ತದ ಇನ್ಸ್‌ಪೆಕ್ಟರ್ ಧೀರಜ್ ಶಿಂಧೆ, ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಲ್.ಕೆ. ಜೂಲಕಟ್ಟಿ, ಪಿಎಸ್‌ಐ ಬಿ.ಟಿ. ರಿತ್ತಿ, ಪಿಎಸ್‌ಐ ರೇಣುಕಾ ಮುಂಡೇವಾಡಗಿ ಸೇರಿದಂತೆ ನಗರ ಠಾಣೆ, ತಾಂತ್ರಿಕ ವಿಭಾಗ, ಸಿಇಎನ್ ಠಾಣೆ ಹಾಗೂ ಇತರ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದರು.

ಈ ಕಾರ್ಯಾಚರಣೆಯಲ್ಲಿ ಗುರು ಬೂದಿಹಾಳ, ಆನಂದ್ ಸಿಂಗ್ ದೊಡ್ಡಮನಿ, ವಿ.ಎಸ್. ಶೆಟ್ಟೆಣ್ಣವರ, ಎಸ್.ಎಸ್. ಮಾವಿನಕಾಯಿ, ಉಮೇಶ್ ಸುಣಗಾರ, ಶರಣಪ್ಪ ನಾಗೇಂದ್ರಗಡ, ಕುಮಾರ ತಿಗರಿ, ಕಲಂದರ್ ನದಾಫ್, ಲಕ್ಷ್ಮೇಶ್ವರ ಠಾಣೆಯ ಸಿಬ್ಬಂದಿ, ಸಂಜೀವ ಕೊರಡೂರು (ಟೆಕ್ನಿಕಲ್ ಸೆಲ್), ಅಣ್ಣಪ್ಪ ಕವಲೂರು, ಹನುಮಂತ ಯಾಡಿಯಾಪೂರ, ಪ್ರಕಾಶ ಉಮಚಗಿ, ವೀರಪ್ಪ ಗೌಡನಾಯ್ಕರ, ಗಣೇಶ್ ತಳವಾರ, ಕಾರ್ತಿಕ ಮಂಗಳಿ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಶೇಷ ತನಿಖಾ ತಂಡವು, ತಾಂತ್ರಿಕ ಮಾಹಿತಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಹಮ್ಮದರಫೀಕ್ ತಂದೆ ಇಸ್ಮಾಯಿಲ್ (36) – ಬಂಟ್ವಾಳ (ದಕ್ಷಿಣ ಕನ್ನಡ), ಇಮ್ರಾನ್ ತಂದೆ ಕುತುಬುದ್ದೀನ್ ತಿಗಡಿ (40) – ಬೈಲಹೊಂಗಲ (ಬೆಳಗಾವಿ) ಹಾಗೂ ಮೌಲಾಲಿ ತಂದೆ ಅಲ್ಲಿಸಾಬ್ ದರ್ಗಾ (34) – ಹಾನಗಲ್ (ಹಾವೇರಿ) ಎಂದು ಗುರುತಿಸಲಾಗಿದೆ. ಎರಡನೇ ಆರೋಪಿಯನ್ನು ಮೇ 24ರಂದು ಹಾಗೂ ಮೊದಲ ಮತ್ತು ಮೂರನೇ ಆರೋಪಿಗಳನ್ನು ಮೇ 28ರಂದು ಬಂಧಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಉದಯನಗರದ ಮನೆಯಲ್ಲೇ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ 330 ಗ್ರಾಂ ಚಿನ್ನಾಭರಣ (₹33.33 ಲಕ್ಷ), 750 ಗ್ರಾಂ ಬೆಳ್ಳಿ ಸಾಮಾನು (₹90 ಸಾವಿರ), ಕಳ್ಳತನಕ್ಕೆ ಬಳಸಿದ್ದ ಮಾರೂತಿ ಸುಜುಕಿ ಎರ್ಟಿಗಾ ಕಾರು (₹8 ಲಕ್ಷ) ಹಾಗೂ ಕಳವು ಹಣದಿಂದ ಖರೀದಿಸಿದ್ದ ಮಾರೂತಿ ಸುಜುಕಿ ಆಲ್ಟೋ ಎಲ್‌ಎಕ್ಸ್ಐ ಕಾರು (₹50 ಸಾವಿರ) ಸೇರಿ ಒಟ್ಟು ₹42.73 ಲಕ್ಷ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಪಾವಧಿಯಲ್ಲೇ ಪ್ರಕರಣವನ್ನು ಭೇದಿಸಿ ಅಂತರ ಜಿಲ್ಲಾ ಕಳ್ಳರ ಜಾಲವನ್ನು ಪತ್ತೆಹಚ್ಚಿದ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಅಭಿನಂದಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img