ಬೆಂಗಳೂರು: ಬೆಂಗಳೂರಿನ ಯೆಲ್ಲೋ ಲೈನ್ ಮೆಟ್ರೋ ಹಳಿಗೆ ಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಸ್ಕೂರ್ ರೋಡ್ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.
ಸಂಜೆ ಸುಮಾರು 5.50ರ ವೇಳೆಗೆ 35 ವರ್ಷದ ವ್ಯಕ್ತಿಯೊಬ್ಬರು ರೈಲು ಬರುತ್ತಿರುವುದನ್ನು ಗಮನಿಸಿ ಏಕಾಏಕಿ ಮೆಟ್ರೋ ಹಳಿಗೆ ಹಾರಿದ್ದಾರೆ. ಘಟನೆ ಗಮನಿಸಿದ ಸ್ಟೇಷನ್ ಕಂಟ್ರೋಲರ್ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ.
ಘಟನೆಯಿಂದ ಯೆಲ್ಲೋ ಲೈನ್ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸದ್ಯ ಆರ್.ವಿ. ರಸ್ತೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಸಂಚಾರ ನಡೆಯುತ್ತಿದೆ.
ಮೆಟ್ರೋ ಸಿಬ್ಬಂದಿ ಹಾಗೂ ಪೊಲೀಸರು ಹಳಿಯಿಂದ ಮೃತದೇಹವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳಕ್ಕೆ ಹೆಬ್ಬುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



