ವಿಜಯನಗರ/ ಹಗರಿಬೊಮ್ಮನಹಳ್ಳಿ: ಇಂದಿರಾ ಆವಾಸ್ ಯೋಜನೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಮಾರಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಮೂವರು ಆರೋಪಿಗಳಿಗೆ ವಿಜಯನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ₹90 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ವಿಜಯನಗರ ಲೋಕಾಯುಕ್ತ ಠಾಣೆಯಲ್ಲಿ 2016ರಲ್ಲಿ ದಾಖಲಾಗಿದ್ದ ಕ್ರೈಂ ಸಂಖ್ಯೆ 01/2016 ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಜುಲೈ 28ರಂದು ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಇಂದಿರಾ ಆವಾಸ್ ಯೋಜನೆಯ ಅನುದಾನವನ್ನು ಅಕ್ರಮವಾಗಿ ದುರ್ಬಳಕೆ ಮಾಡಿಕೊಂಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಶಿಕ್ಷೆಗೆ ಗುರಿಯಾದವರು ಆರೋಪಿ ಸಂಖ್ಯೆ-02 ಶಾಂತಾರಾಮ್ (ಆಗಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ), ಆರೋಪಿ ಸಂಖ್ಯೆ-03 ಕನಕಪ್ಪ (ಗ್ರಾಮ ಪಂಚಾಯಿತಿ ಸದಸ್ಯ) ಹಾಗೂ ಆರೋಪಿ ಸಂಖ್ಯೆ-05 ರಾಮಚಂದ್ರ ನಾಯ್ಕ (ಆಗಿನ ಗ್ರಾಮ ಪಂಚಾಯಿತಿ ಅಧ್ಯಕ್ಷ). ಮೂವರಿಗೂ ತಲಾ ಮೂರು ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ₹90,000 ದಂಡ ವಿಧಿಸಲಾಗಿದೆ.
ಪ್ರಕರಣದ ತನಿಖೆಯನ್ನು ಕರ್ನಾಟಕ ಲೋಕಾಯುಕ್ತ ಹೊಸಪೇಟೆ ವಿಭಾಗದ ಆಗಿನ ಡಿವೈಎಸ್ಪಿ ಎನ್.ಆರ್. ಮಹಾಲಿಂಗಾರೆಡ್ಡಿ ನಡೆಸಿದ್ದರು. ತನಿಖೆ ವೇಳೆ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988ರ ಕಲಂ 13(1)(ಡಿ) ಸಹಿತ 13(2) ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 420, 468 ಮತ್ತು 471 ಅಡಿಯಲ್ಲಿ ಆರೋಪಗಳು ಸಾಬೀತಾಗುವಂತೆ ಸಾಕ್ಷ್ಯ ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.
ನ್ಯಾಯಾಲಯದಲ್ಲಿ ಕರ್ನಾಟಕ ಲೋಕಾಯುಕ್ತದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಜಿ. ನಾಗರಾಜ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ವಿಜಯನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದೆ.
ಈ ಕುರಿತು ಕರ್ನಾಟಕ ಲೋಕಾಯುಕ್ತ, ಬಳ್ಳಾರಿ ಪೊಲೀಸ್ ಅಧೀಕ್ಷಕ ವಾಸುದೇವ ರಾಮ್ ಎನ್. ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸರ್ಕಾರಿ ಯೋಜನೆಗಳ ಅನುದಾನ ದುರ್ಬಳಕೆ ಮಾಡುವವರ ವಿರುದ್ಧ ಕಾನೂನು ಕಠಿಣ ಕ್ರಮ ಕೈಗೊಳ್ಳಲಿದೆ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ.



