ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬೆಂಗಳೂರು ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.
ರಾಜ್ಯದ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ ಸುಮಾರು ಒಂದು ಕೋಟಿ ಮತದಾರರು ಬೆಂಗಳೂರಿನಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ.
SIR ಪ್ರಕ್ರಿಯೆಯಡಿ ರಾಜ್ಯಾದ್ಯಂತ ಸುಮಾರು 84 ಲಕ್ಷ ಮತದಾರರನ್ನು ASDDO ವರ್ಗದಲ್ಲಿ ಗುರುತಿಸಲಾಗಿದೆ. ಈ ಹೆಸರುಗಳು ಆಗಸ್ಟ್ 17ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದಿಲ್ಲ ಎಂದು ತಿಳಿದು ಬಂದಿದೆ.
ASDDO ಎಂದರೇನು?
ASDDO ಎಂದರೆ Absent (ಗೈರಾದವರು), Shifted (ಸ್ಥಳಾಂತರಗೊಂಡವರು), Dead (ಮೃತಪಟ್ಟವರು), Duplicate and Others ಅಂದರೆ ಗೈರುಹಾಜರಾಗಿರುವವರು, ಬೇರೆಡೆಗೆ ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಹೆಸರುಗಳು ಅಥವಾ ಇತರ ಕಾರಣಗಳಿಂದ ಪರಿಶೀಲನೆಗೆ ಒಳಪಟ್ಟ ಮತದಾರರನ್ನು ಒಳಗೊಂಡ ವರ್ಗವಾಗಿದೆ.
ಬೆಂಗಳೂರಿನಲ್ಲಿ 36.75 ಲಕ್ಷ ಮತದಾರರು ಗುರುತು:
ರಾಜ್ಯದ ಒಟ್ಟು 84 ಲಕ್ಷ ASDDO ಮತದಾರರ ಪೈಕಿ ಬೆಂಗಳೂರಿನಲ್ಲೇ 36.75 ಲಕ್ಷ ಮತದಾರರು ಇದ್ದಾರೆ. ಇದು ರಾಜ್ಯದ ಒಟ್ಟು ASDDO ಪಟ್ಟಿಯ ಶೇ.46.7ರಷ್ಟಾಗಿದೆ.
ವಿಭಾಗವಾರು ಗಮನಿಸಿದರೆ, ಬೆಂಗಳೂರು ನಗರದಲ್ಲಿ 13.55 ಲಕ್ಷ, ಬೆಂಗಳೂರು ಉತ್ತರದಲ್ಲಿ 9 ಲಕ್ಷ, ಬೆಂಗಳೂರು ಕೇಂದ್ರದಲ್ಲಿ 7.40 ಲಕ್ಷ ಹಾಗೂ ಬೆಂಗಳೂರು ದಕ್ಷಿಣದಲ್ಲಿ 9.35 ಲಕ್ಷ ಮತದಾರರನ್ನು ASDDO ಪಟ್ಟಿಯಲ್ಲಿ ಗುರುತಿಸಲಾಗಿದೆ.
ಗೈರುಹಾಜರಾಗಿರುವ ಅಥವಾ ತಪ್ಪಾಗಿ ಸ್ಥಳಾಂತರಗೊಂಡಿರುವ ನೈಜ ಮತದಾರರು ಆಗಸ್ಟ್ 8ರೊಳಗೆ ತಮ್ಮ ಬೂತ್ ಮಟ್ಟದ ಅಧಿಕಾರಿಗಳನ್ನು (BLO) ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮನವಿ ಮಾಡಿದ್ದಾರೆ.
ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್ಗಳು (BLA) ತಮ್ಮ ಬಳಿ ನೀಡಿರುವ ASDDO ಪಟ್ಟಿಯನ್ನು ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.
16.52 ಲಕ್ಷ ಅರ್ಜಿಗಳ ಡಿಜಿಟಲೀಕರಣ ಬಾಕಿ:
ಬೆಂಗಳೂರು ವ್ಯಾಪ್ತಿಯಲ್ಲಿ SIR ಪ್ರಕ್ರಿಯೆಯಡಿ ಸಲ್ಲಿಕೆಯಾದ ಅರ್ಜಿಗಳ ಡಿಜಿಟಲೀಕರಣ ಕಾರ್ಯವೂ ನಿಧಾನಗತಿಯಲ್ಲಿ ಸಾಗುತ್ತಿದೆ. ಒಟ್ಟು 16.52 ಲಕ್ಷ ಅರ್ಜಿಗಳು ಇನ್ನೂ ಡಿಜಿಟಲೀಕರಣಕ್ಕೆ ಬಾಕಿ ಉಳಿದಿವೆ.
ಬೆಂಗಳೂರು ನಗರದಲ್ಲಿ ಶೇ.48.8, ಬೆಂಗಳೂರು ಉತ್ತರದಲ್ಲಿ ಶೇ.46.2, ಬೆಂಗಳೂರು ಕೇಂದ್ರದಲ್ಲಿ ಶೇ.44.6 ಹಾಗೂ ಬೆಂಗಳೂರು ದಕ್ಷಿಣದಲ್ಲಿ ಶೇ.42.6ರಷ್ಟು ಅರ್ಜಿಗಳ ಡಿಜಿಟಲೀಕರಣ ಪೂರ್ಣಗೊಂಡಿದೆ.
ಮನೆ ಮನೆಗೆ ತೆರಳಿ ಜಾಗೃತಿ:
ಮತದಾರರಿಗೆ ಮಾಹಿತಿ ನೀಡಲು BLO ಹಾಗೂ ಇತರ ಸಿಬ್ಬಂದಿಯ ತಂಡಗಳನ್ನು ನಿಯೋಜಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವುದರ ಜೊತೆಗೆ ಮನೆ ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸಲಾಗುತ್ತಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
SIR 2002ರ ಹಳೆಯ ಮಾಹಿತಿಯೊಂದಿಗೆ ಮ್ಯಾಪ್ ಆಗದಿದ್ದರೂ ಮತದಾರರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಮ್ಯಾಪ್ ಆಗದ 29 ಲಕ್ಷಕ್ಕೂ ಹೆಚ್ಚು ಮತದಾರರು ಫಾರಂ ಸಲ್ಲಿಸಿದ್ದು, ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಉಳಿಸಿಕೊಳ್ಳಲು ಅವಕಾಶ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ASDDO ಪ್ರಕರಣಗಳು ಹೆಚ್ಚಾಗಲು ಕಾರಣವೇನು?
2002ರ ಹಳೆಯ ಮತದಾರರ ದಾಖಲೆಗಳನ್ನು ಪತ್ತೆಹಚ್ಚುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಬೆಂಗಳೂರಿನಲ್ಲಿ SIR ಪ್ರಕ್ರಿಯೆ ನಿಧಾನವಾಗಲು ಪ್ರಮುಖ ಕಾರಣವಾಗಿದೆ.
2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ವಿಧಾನಸಭಾ ಕ್ಷೇತ್ರಗಳು ಹಾಗೂ ಮತಗಟ್ಟೆಗಳಲ್ಲಿ ಬದಲಾವಣೆಗಳಾಗಿರುವುದರಿಂದ ಹಳೆಯ ದಾಖಲೆಗಳನ್ನು ಪತ್ತೆಹಚ್ಚುವುದು ಕಷ್ಟವಾಗುತ್ತಿದೆ. ಜೊತೆಗೆ ತಾಂತ್ರಿಕ ಸಮಸ್ಯೆಗಳೂ ASDDO ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.



