ಚಿತ್ರದುರ್ಗ: ಜಿಲ್ಲೆಯ ಸಿರಿಗೆರೆ ಸಮೀಪದ ಸಿಡಿಗೆರೆ ಹೋಬಳಿಯ ಜಮ್ಮೇನಹಳ್ಳಿ ಗ್ರಾಮದಲ್ಲಿ ಜೋಡಿ ಹೆಣ್ಣು ಚಿರತೆಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಗ್ರಾಮದ ಜಮೀನೊಂದರಲ್ಲಿ ಎರಡು ಹೆಣ್ಣು ಚಿರತೆಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜಮೀನಿಗೆ ತೆರಳಿದ್ದ ರೈತರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಬಳಿಕ ಅರಣ್ಯಾಧಿಕಾರಿ ರಾಮಚಂದ್ರಪ್ಪ ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆಗಳ ಸಾವು ವಿಷಪ್ರಾಶನ, ವಿದ್ಯುತ್ ಸ್ಪರ್ಶ ಅಥವಾ ಇತರೆ ಕಾರಣಗಳಿಂದ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಚಿರತೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಗತ್ಯ ಮಾದರಿಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪ್ರಯೋಗಾಲಯದ ವರದಿ ಬಂದ ಬಳಿಕವೇ ಚಿರತೆಗಳ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವನ್ಯಜೀವಿಗಳ ಸಂರಕ್ಷಣೆಗೆ ಇಲಾಖೆ ಹೆಚ್ಚಿನ ನಿಗಾ ವಹಿಸಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಗತ್ಯವಿರುವ ಪ್ರದೇಶಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸುವ ಮೂಲಕ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಧಿವಿಜ್ಞಾನ ವರದಿ ಬಳಿಕ ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ.



