ವಿಜಯಸಾಕ್ಷಿ ಸುದ್ದಿ, ಗದಗ: ಗದಗ–ಹರಪನಹಳ್ಳಿ ನೂತನ ರೈಲ್ವೆ ಮಾರ್ಗ ಕಾಮಗಾರಿಯನ್ನು ತಕ್ಷಣ ಆರಂಭಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮುಂಡರಗಿ ತಾಲೂಕು ರೈಲ್ವೆ ಹೋರಾಟ ಸಮಿತಿ ‘ದೆಹಲಿ ಚಲೋ’ ಅಭಿಯಾನಕ್ಕೆ ಚಾಲನೆ ನೀಡಿದೆ.
ಸಮಿತಿಯ ಅಧ್ಯಕ್ಷ ಬಸವರಾಜ ಎಸ್. ದೇಸಾಯಿ ನೇತೃತ್ವದ ನಿಯೋಗವು ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ನವದೆಹಲಿಗೆ ಪ್ರಯಾಣ ಬೆಳೆಸಿದ್ದು, ಕೇಂದ್ರ ರೈಲ್ವೆ ಸಚಿವರು ಹಾಗೂ ರೈಲ್ವೆ ಮಂಡಳಿಯ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಗೆ ಸಂಬಂಧಿಸಿದ ಮನವಿ ಸಲ್ಲಿಸಲು ನಿರ್ಧರಿಸಿದೆ.
ನಿಯೋಗದಲ್ಲಿ ಮುತ್ತಪ್ಪ ಪಾವಡಶೆಟ್ಟಿ, ನಿತಿನ್ ವಿ. ದೊಡ್ಡಣ್ಣವರ, ಧವಳ ಸಾಹೇಬ್ ಮುಲ್ಲಾ, ಸಚಿನ್‌ಕುಮಾರ್ ಬಿ. ದೇಸಾಯಿ ಸೇರಿದಂತೆ ಸಮಿತಿಯ ಪ್ರಮುಖ ಸದಸ್ಯರು ಪಾಲ್ಗೊಂಡಿದ್ದಾರೆ.
ದೆಹಲಿಯಲ್ಲಿ ಧರಣಿ ನಡೆಸುವ ಮೂಲಕ ಯೋಜನೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಮಿತಿ ಮುಂದಾಗಿದೆ.
ಗದಗ–ಹರಪನಹಳ್ಳಿ ರೈಲು ಮಾರ್ಗವು ಮುಂಡರಗಿ ಹಾಗೂ ಹೂವಿನಹಡಗಲಿ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದು, ಈ ಯೋಜನೆ ಜಾರಿಯಾದರೆ ಗ್ರಾಮೀಣ ಪ್ರದೇಶದ ಸಂಚಾರ, ರೈತರ ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ಉತ್ತೇಜನ ದೊರೆಯಲಿದೆ ಎಂದು ಸಮಿತಿ ತಿಳಿಸಿದೆ.
“ರೈಲ್ವೆ ಸಂಪರ್ಕದ ವಿಷಯದಲ್ಲಿ ಈ ಭಾಗದ ಜನರು ದಶಕಗಳಿಂದ ನಿರ್ಲಕ್ಷ್ಯ ಅನುಭವಿಸುತ್ತಿದ್ದಾರೆ. ಗದಗ–ಹರಪನಹಳ್ಳಿ ರೈಲು ಮಾರ್ಗ ಈ ಭಾಗದ ಅಭಿವೃದ್ಧಿಗೆ ಜೀವನಾಡಿಯಾಗಲಿದೆ. ಸರ್ಕಾರದಿಂದ ಶೀಘ್ರ ಸ್ಪಂದನೆ ದೊರೆಯದಿದ್ದರೆ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ.”
ಬಸವರಾಜ ಎಸ್. ದೇಸಾಯಿ, ಅಧ್ಯಕ್ಷರು, ಮುಂಡರಗಿ ತಾಲೂಕು ರೈಲ್ವೆ ಹೋರಾಟ ಸಮಿತಿ



