ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಪಾವತಿ ಬಳಕೆಯ ನಡುವೆ, ₹2,000ಕ್ಕಿಂತ ಹೆಚ್ಚಿನ ಮೊತ್ತದ UPI ವಹಿವಾಟುಗಳಿಗೆ ಶುಲ್ಕ ವಿಧಿಸುವ ಕುರಿತು ಕೇಂದ್ರ ಸರ್ಕಾರ ಹೊಸ ಪ್ರಸ್ತಾವನೆ ಮುಂದಿಟ್ಟಿದೆ.
ವ್ಯಾಪಾರಿ ವಹಿವಾಟುಗಳಿಗೆ ಸಂಬಂಧಿಸಿದ UPI ಪಾವತಿಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅಥವಾ ವ್ಯವಹಾರ ಶುಲ್ಕ ವಿಧಿಸಲು ಅವಕಾಶ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರಸ್ತಾವಿತ ವ್ಯವಸ್ಥೆಯಡಿ ₹2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ.0.25 ರಿಂದ ಶೇ.0.4 ರವರೆಗೆ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಆದರೆ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ನಡೆಯುವ UPI ಪಾವತಿಗಳನ್ನು ಈ ವ್ಯಾಪ್ತಿಯಿಂದ ಹೊರಗಿಡುವ ಸಾಧ್ಯತೆಯಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆಯಲ್ಲಿ, ಬ್ಯಾಂಕುಗಳು ಹಾಗೂ ಪಾವತಿ ಸೇವಾ ಪೂರೈಕೆದಾರರ ಕೆಲವು ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೇಲೆ MDR ವಿಧಿಸುವ ನಿರ್ಬಂಧವನ್ನು ತೆಗೆದುಹಾಕುವ ಪ್ರಸ್ತಾವನೆ ಇದೆ.
ಯಾವಾಗ ಜಾರಿಗೆ? ಇನ್ನೂ ನಿರ್ಧಾರವಾಗಿಲ್ಲ:
ಈ ಶುಲ್ಕ ವ್ಯವಸ್ಥೆಯನ್ನು ಯಾವಾಗ ಜಾರಿಗೆ ತರಲಾಗುತ್ತದೆ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
₹2,000ಕ್ಕಿಂತ ಹೆಚ್ಚಿನ ಮೊತ್ತದ UPI ವಹಿವಾಟುಗಳು ಒಟ್ಟು UPI ವಹಿವಾಟುಗಳ ಶೇ.5ರಷ್ಟಿದ್ದರೂ, ಒಟ್ಟು ವಹಿವಾಟಿನ ಮೌಲ್ಯದ ಸುಮಾರು ಶೇ.65ರಷ್ಟು ಪಾಲು ಹೊಂದಿವೆ ಎನ್ನಲಾಗಿದೆ.
ಈ ಕ್ರಮ ಜಾರಿಗೆ ಬಂದರೂ ಹಾಲು, ತರಕಾರಿ, ದಿನಸಿ ಖರೀದಿ ಅಥವಾ ಆಟೋ-ಟ್ಯಾಕ್ಸಿ ಪಾವತಿಗಳಂತಹ ಸಣ್ಣ ಮೊತ್ತದ ವಹಿವಾಟುಗಳಿಗೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ ತಿಂಗಳಲ್ಲಿ ದೇಶದಲ್ಲಿ ಸುಮಾರು 23.7 ಬಿಲಿಯನ್ (2,370 ಕೋಟಿ) UPI ವಹಿವಾಟುಗಳು ನಡೆದಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 29.9 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಪ್ರಸ್ತಾವಿತ ಶುಲ್ಕ ಜಾರಿಗೆ ಬಂದರೂ ಶೇ.95ರಷ್ಟು UPI ವಹಿವಾಟುಗಳು MDR ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೆ, ಎಲ್ಲಾ ವ್ಯಾಪಾರಿಗಳು ಈ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸುವುದಿಲ್ಲ ಎಂದು ತಿಳಿಸಿದ್ದಾರೆ.



