ಉಡುಪಿ: ಮುದರಂಗಡಿಯಲ್ಲಿ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಅವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆಗೈದ ಪ್ರಕರಣದ ತನಿಖೆಯಲ್ಲಿ ಉಡುಪಿ ಪೊಲೀಸರಿಗೆ ಮಹತ್ವದ ಯಶಸ್ಸು ಸಿಕ್ಕಿದೆ. ಡೇವಿಡ್ ಹತ್ಯೆಯ ಹಿಂದೆ ಹಣಕಾಸಿನ ವ್ಯವಹಾರದ ವಿಚಾರವಿದ್ದು, ಉತ್ತರ ಭಾರತದ ಸುಪಾರಿ ಕಿಲ್ಲರ್‌ಗಳ ಮೂಲಕ ಕೃತ್ಯ ಎಸಗಿಸಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಾರ್ಪ್ ಶೂಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಡೇವಿಡ್ ಡಿಸೋಜಾ ಅವರನ್ನು ಹತ್ಯೆಗೈಯಲು ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಬಿಹಾರ ಮೂಲದ ಶಾರ್ಪ್ ಶೂಟರ್‌ಗಳಿಗೆ ಸುಪಾರಿ ನೀಡಲಾಗಿತ್ತು ಎನ್ನಲಾಗಿದೆ. ಸುಪಾರಿ ಪಡೆದಿದ್ದ ಮೂವರ ತಂಡ ಮುದರಂಗಡಿಗೆ ಬಂದು ಹತ್ಯೆ ನಡೆಸಿದ ಬಳಿಕ ಪರಾರಿಯಾಗಲು ಯತ್ನಿಸಿತ್ತು.
ಕೃತ್ಯ ನಡೆದ ಬಳಿಕ ಆರೋಪಿಗಳ ಬೆನ್ನುಹತ್ತಿದ ಉಡುಪಿ ಪೊಲೀಸರು ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿದ್ದರು. ಕೊನೆಗೆ ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಶಿರೂರು ಸಮೀಪ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಲ್ಲಿ ಒಬ್ಬನನ್ನು ರಾಜು ಎಂದು ಗುರುತಿಸಲಾಗಿದ್ದು, ಉಳಿದ ಆರೋಪಿಗಳು ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡಿದ್ದರು ಎನ್ನಲಾಗಿದೆ. ಬಂಧಿತರ ಸಂಪೂರ್ಣ ಹೆಸರು ಹಾಗೂ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಡೇವಿಡ್ ಡಿಸೋಜಾ ಹತ್ಯೆಗೆ ಸುಪಾರಿ ನೀಡಿದ ಪ್ರಮುಖ ಆರೋಪಿಗಳು ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಹೀಗಾಗಿ ಬಂಧಿತ ಶಾರ್ಪ್ ಶೂಟರ್‌ಗಳ ವಿಚಾರಣೆ ನಡೆಸಿ ಹತ್ಯೆಯ ಹಿಂದಿನ ಪ್ರಮುಖ ವ್ಯಕ್ತಿಗಳು ಹಾಗೂ ಹಣಕಾಸಿನ ವ್ಯವಹಾರದ ಕುರಿತು ಮಾಹಿತಿ ಕಲೆಹಾಕಲು ತನಿಖೆ ಮುಂದುವರಿಸಲಾಗಿದೆ.
ಮುದರಂಗಡಿಯಲ್ಲಿ ನಡೆದಿದ್ದ ಈ ಭೀಕರ ಶೂಟೌಟ್ ಪ್ರಕರಣದಲ್ಲಿ ಕೃತ್ಯ ಎಸಗಿದ ಆರೋಪಿಗಳನ್ನು ಕ್ಷಿಪ್ರವಾಗಿ ಬಂಧಿಸಿರುವುದು ತನಿಖೆಗೆ ಪ್ರಮುಖ ಮುನ್ನಡೆಯಾಗಿದ್ದು, ಇದೀಗ ಸುಪಾರಿ ನೀಡಿದವರ ಬಂಧನದತ್ತ ಪೊಲೀಸರ ಗಮನ ಕೇಂದ್ರೀಕೃತವಾಗಿದೆ.



