ಬೆಂಗಳೂರು/ನವದೆಹಲಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರ ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ತಮ್ಮಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿ ಬಸವರಾಜ ಹೊರಟ್ಟಿ ರಾಜ್ಯಪಾಲರಿಗೆ ದೂರು ನೀಡಿದ್ದು, ಈ ಕುರಿತು ತಾವು ರಾಜ್ಯಪಾಲರನ್ನು ಭೇಟಿಯಾಗಿ ವಿವರಣೆ ನೀಡಿದ್ದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷದ ವರಿಷ್ಠರು ಹೈಕಮಾಂಡ್ ಆಗಿದ್ದು, ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿರುವುದಾಗಿ ಹೇಳಿದರು.
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಅವರು, ಬಸವರಾಜ ಹೊರಟ್ಟಿಯವರು ಸಂತೋಷದಿಂದಲೇ ರಾಜೀನಾಮೆ ನೀಡಿದ್ದರು. ಆದರೆ, ಇದೀಗ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಈ ವಿಚಾರವಾಗಿ ತಾವು ಮತ್ತು ಸಚಿವ ಯು.ಟಿ. ಖಾದರ್ ರಾಜ್ಯಪಾಲರನ್ನು ಭೇಟಿಯಾಗಿದ್ದೇವೆ. ಹೊರಟ್ಟಿಯವರು ಸ್ವಯಂ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದಾರೆ ಎಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದು ಸಿಎಂ ಹೇಳಿದರು.
ಒಂದು ವೇಳೆ ಅವರು ರಾಜೀನಾಮೆ ನೀಡದಿದ್ದರೆ, ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಪರಿಸ್ಥಿತಿ ಎದುರಾಗಿತ್ತು. ಆದರೆ, ಅದನ್ನು ತಪ್ಪಿಸಲು ಬಸವರಾಜ ಹೊರಟ್ಟಿಯವರೇ ಗೌರವಯುತವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಹೊರಟ್ಟಿಯವರು ಸ್ವತಃ ಟೈಪ್ ಮಾಡಿದ್ದ ರಾಜೀನಾಮೆಯನ್ನೇ ಸ್ವೀಕರಿಸಲಾಗಿದೆ. ಈ ಕುರಿತು ಹಿಂದಿನ ಉದಾಹರಣೆಗಳು, ಕಾನೂನು ಅಂಶಗಳು ಹಾಗೂ ಸಂಬಂಧಿತ ವಿಚಾರಗಳನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ರಾಜ್ಯಪಾಲರು ಕಾನೂನು ಚೌಕಟ್ಟಿನೊಳಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಹೊರಟ್ಟಿ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಏನಿದೆ?
ಬಸವರಾಜ ಹೊರಟ್ಟಿ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ, 2026ರ ಆಗಸ್ಟ್ 7ರಂದು ಕರ್ನಾಟಕ ವಿಧಾನ ಪರಿಷತ್ತಿನ ಆವರಣದಲ್ಲಿರುವ ತಮ್ಮ ಅಧಿಕೃತ ಕೊಠಡಿಯಲ್ಲಿ ನಡೆದ ಘಟನೆಗಳ ಕುರಿತು ವಿವರಿಸಿದ್ದಾರೆ.
ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರೊಬ್ಬರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಂಬಂಧಿಸಿದಂತೆ ತಾವು ಅಧಿಕೃತ ಕೊಠಡಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಕೆಲವು ಸದಸ್ಯರು ತಮ್ಮ ಕೊಠಡಿಗೆ ಆಗಮಿಸಿದ್ದರು ಎಂದು ಹೊರಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ಅದೇ ದಿನ ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ರಾಜೀನಾಮೆ ನೀಡುವಂತೆ ತಮ್ಮ ಬಳಿ ಪ್ರಸ್ತಾಪ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಆದರೆ, ಮುಂಬರುವ ಮುಂಗಾರು ಅಧಿವೇಶನವನ್ನು ಕರೆಯಲು ರಾಜ್ಯಪಾಲರು ಆದೇಶಿಸಿರುವ ಹಿನ್ನೆಲೆಯಲ್ಲಿ, ಆಗಸ್ಟ್ 14ರಂದು ಸದನದಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಧನ್ಯವಾದ ಮತ್ತು ಕೃತಜ್ಞತೆ ಸಲ್ಲಿಸಿದ ಬಳಿಕ ರಾಜೀನಾಮೆ ನೀಡುವುದು ತಮ್ಮ ಇಚ್ಛೆಯಾಗಿತ್ತು ಎಂದು ಹೊರಟ್ಟಿ ಹೇಳಿದ್ದಾರೆ.
ಈ ವಿಚಾರವನ್ನು ತಾವು ಈಗಾಗಲೇ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೆ. ಅಲ್ಲದೆ, ಇದೇ ವಿಷಯ ರಾಜ್ಯದ ಹಲವು ಮಾಧ್ಯಮಗಳಲ್ಲೂ ವರದಿಯಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೂ, ಮುಖ್ಯಮಂತ್ರಿ ಅದೇ ದಿನ ರಾಜೀನಾಮೆ ನೀಡುವಂತೆ ಸೂಚಿಸಿದರು. ತಮ್ಮ ಅಧಿಕೃತ ಕೊಠಡಿಯಲ್ಲಿ ನಡೆದ ಈ ದಿಢೀರ್ ಬೆಳವಣಿಗೆ ಅಚ್ಚರಿ ಮೂಡಿಸಿತು. ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳ ಕೋರಿಕೆಯ ಮೇರೆಗೆ ಆ ಕ್ಷಣದಲ್ಲಿ ರಾಜೀನಾಮೆ ನೀಡುವುದು ತಮ್ಮ ಕರ್ತವ್ಯವೆಂದು ಭಾವಿಸಿದ್ದಾಗಿ ಹೊರಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬೆಳವಣಿಗೆಯನ್ನು ರಾಜ್ಯಪಾಲರ ಗಮನಕ್ಕೆ ತರುವುದು ತಮ್ಮ ಕರ್ತವ್ಯವೆಂದು ಭಾವಿಸಿ ದೂರು ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.
ಸಿಎಂ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
ಇತ್ತ, ಬಿಜೆಪಿ ನಿಯೋಗವೂ ರಾಜ್ಯಪಾಲರನ್ನು ಭೇಟಿಯಾಗಿ ದೂರು ಸಲ್ಲಿಸಿದೆ. ಬಸವರಾಜ ಹೊರಟ್ಟಿಯವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿರುವ ಬಿಜೆಪಿ, ಈ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದೆ.
ಹೊರಟ್ಟಿ ಅವರ ಆರೋಪ, ಮುಖ್ಯಮಂತ್ರಿ ನೀಡಿರುವ ಸ್ಪಷ್ಟನೆ ಹಾಗೂ ಬಿಜೆಪಿ ದೂರು ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸಭಾಪತಿ ರಾಜೀನಾಮೆ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

