ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಗೆ ಜಿಬಿಎ ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪರಿಸರ ಸ್ನೇಹಿ ರೀತಿಯಲ್ಲಿ ಗಣೇಶೋತ್ಸವ ಆಚರಿಸುವಂತೆ ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳಿಗಳಿಗೆ ಇಲಾಖೆ ಕರೆ ನೀಡಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿದೆ.
ಜಿಬಿಎ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳು, ಭಾರ ಲೋಹಗಳನ್ನು ಒಳಗೊಂಡಿರುವ ರಾಸಾಯನಿಕ ಬಣ್ಣ ಬಳಸಿ ತಯಾರಿಸಿದ ಮೂರ್ತಿಗಳು ಹಾಗೂ ಜೈವಿಕವಾಗಿ ವಿಘಟನೆಯಾಗದ ಕೃತಕ ವಸ್ತುಗಳಿಂದ ನಿರ್ಮಿಸಿದ ಮೂರ್ತಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ಇಂತಹ ಮೂರ್ತಿಗಳನ್ನು ನಗರದ ಕೆರೆ, ಬಾವಿ ಸೇರಿದಂತೆ ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವುದಕ್ಕೂ ಸಂಪೂರ್ಣ ನಿಷೇಧವಿದೆ ಎಂದು ಇಲಾಖೆ ತಿಳಿಸಿದೆ.
ಜಲಮಾಲಿನ್ಯ ತಡೆಗೆ ಕ್ರಮ
ಪ್ರತಿ ವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ರಾಸಾಯನಿಕ ಬಣ್ಣ ಹಾಗೂ ಪಿಒಪಿಯಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ಜಲಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಇಲಾಖೆ ಆತಂಕ ವ್ಯಕ್ತಪಡಿಸಿದೆ.
ರಾಸಾಯನಿಕ ಬಣ್ಣಗಳಿಂದ ಕೂಡಿದ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಜಲಮೂಲಗಳ ನೀರು ಹಾಗೂ ಸುತ್ತಮುತ್ತಲಿನ ಮಣ್ಣು ಕಲುಷಿತಗೊಳ್ಳುತ್ತದೆ. ಇದರಿಂದ ಪರಿಸರ ವ್ಯವಸ್ಥೆ ಮಾತ್ರವಲ್ಲದೆ ಜಲಚರಗಳ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸದೆ ರಾಸಾಯನಿಕ ಬಣ್ಣದ ಮೂರ್ತಿಗಳನ್ನು ನೀರಿಗೆ ವಿಸರ್ಜಿಸುವುದರಿಂದ ನೀರು ಮತ್ತು ಭೂಮಿ ಎರಡೂ ಕಲುಷಿತಗೊಳ್ಳುತ್ತಿವೆ. ಇದರಿಂದ ಜಲಚರಗಳು ಹಾಗೂ ಒಟ್ಟಾರೆ ಪರಿಸರ ವ್ಯವಸ್ಥೆಗೆ ಹಾನಿಯಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೈಸರ್ಗಿಕ ಮಣ್ಣಿನ ಗಣಪತಿ ಬಳಕೆಗೆ ಸೂಚನೆ
ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಅರಿತು ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳಿಗಳು ನೈಸರ್ಗಿಕ ಜೇಡಿಮಣ್ಣು ಮತ್ತು ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಬಳಸಬೇಕು ಎಂದು ಜಿಬಿಎ ಅಧಿಕಾರಿಗಳು ಸೂಚಿಸಿದ್ದಾರೆ.
ಪರಿಸರಕ್ಕೆ ಹಾನಿಕಾರಕವಾದ ಪಿಒಪಿ ಹಾಗೂ ರಾಸಾಯನಿಕ ಬಣ್ಣದ ಮೂರ್ತಿಗಳ ಬಳಕೆಯಿಂದ ದೂರವಿದ್ದು, ಪರಿಸರ ಸ್ನೇಹಿ ರೀತಿಯಲ್ಲಿ ಹಬ್ಬ ಆಚರಿಸುವಂತೆ ಇಲಾಖೆ ಮನವಿ ಮಾಡಿದೆ.
ನಿಯಮಗಳನ್ನು ಉಲ್ಲಂಘಿಸಿ ಪಿಒಪಿ ಅಥವಾ ನಿಷೇಧಿತ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಉತ್ಪಾದನೆ, ಮಾರಾಟ ಅಥವಾ ವಿಸರ್ಜನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.



