ಕೋಲ್ಕತಾ: ಅತ್ಯಾಚಾರ ಹಾಗೂ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳದ ಕ್ರಿಕೆಟಿಗ ಹಾಗೂ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿರುವ ಅಭಿಷೇಕ್ ಪೊರೆಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಅಭಿಷೇಕ್ ಪೊರೆಲ್ ಅವರನ್ನು ಶೀಘ್ರವಾಗಿ ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದು, ಹೂಗ್ಲಿ ಗ್ರಾಮಾಂತರ ಪೊಲೀಸ್ ಎಸ್ಪಿ ಕುನ್ವರ್ ಭೂಷಣ್ ಸಿಂಗ್ ಅವರು ಬಂಧನವನ್ನು ಖಚಿತಪಡಿಸಿದ್ದಾರೆ.
ದಮ್ ದಮ್ ಪೊಲೀಸ್ ಠಾಣಾ ವ್ಯಾಪ್ತಿಯ ಎಮಾಮಿ ಸಿಟಿಯಿಂದ ಅಭಿಷೇಕ್ ಪೊರೆಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಮಹಿಳೆಯ ಪ್ರಕಾರ, ತಾನು ಹಾಗೂ ಅಭಿಷೇಕ್ ಪೊರೆಲ್ ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದೆವು. ಕಳೆದ ವರ್ಷ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದ ಬಳಿಕ ಪೊರೆಲ್ ತಮ್ಮಿಂದ ದೂರವಾಗಲು ಆರಂಭಿಸಿದ್ದರು ಎಂದು ಆರೋಪಿಸಿದ್ದಾರೆ.
ಅಭಿಷೇಕ್ ಪೊರೆಲ್ ಈ ಹಿಂದೆ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ತನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರು. ಅಲ್ಲದೆ, ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ, ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಇನ್ನೊಂದೆಡೆ, ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಅಭಿಷೇಕ್ ಪೊರೆಲ್ ತಳ್ಳಿಹಾಕಿದ್ದಾರೆ. ಹೀಗಾಗಿ ಪ್ರಕರಣದ ಮುಂದಿನ ತನಿಖೆ ಹಾಗೂ ಕಾನೂನು ಪ್ರಕ್ರಿಯೆಯಲ್ಲಿ ಆರೋಪಗಳಿಗೆ ಸಂಬಂಧಿಸಿದ ವಾಸ್ತವಾಂಶಗಳು ಮತ್ತಷ್ಟು ಸ್ಪಷ್ಟವಾಗಬೇಕಿದೆ.



