ಕಲಬುರಗಿ: ಹಬ್ಬಕ್ಕೆ ತಂದೆ ಬಟ್ಟೆ ಕೊಡಿಸದಿದ್ದಕ್ಕೆ ಮನನೊಂದು ಇಬ್ಬರು ಅಪ್ರಾಪ್ತ ವಯಸ್ಸಿನ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ್ ಪಟ್ಟಣದ ಶಾಂತನಗರದಲ್ಲಿ ನಡೆದಿದೆ.
ಮೃತರನ್ನು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಪೂಜಾ (17) ಹಾಗೂ ಹಣಮಂತಿ ಎಂದು ಗುರುತಿಸಲಾಗಿದೆ.
ಮನೆಯವರು ಇಲ್ಲದ ಸಮಯದಲ್ಲಿ ಇಬ್ಬರೂ ಸಹೋದರಿಯರು ಮನೆಯಲ್ಲೇ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಬಾಲಕಿಯರ ತಾಯಿ ಸುಮಾರು 10 ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಸಹೋದರ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಶಹಾಬಾದ್‌ನಲ್ಲೇ ವಾಸವಾಗಿದ್ದರು ಎನ್ನಲಾಗಿದೆ.
ತಂದೆಗೆ ಮದ್ಯಪಾನದ ಚಟವಿತ್ತು ಎಂದು ತಿಳಿದುಬಂದಿದೆ. ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಕೊಡಿಸುವಂತೆ ಇಬ್ಬರು ಸಹೋದರಿಯರು ತಂದೆಯನ್ನು ಕೇಳಿದ್ದರು ಎನ್ನಲಾಗಿದೆ. ಆದರೆ ತಂದೆ ಬಟ್ಟೆ ಕೊಡಿಸದ ಹಿನ್ನೆಲೆಯಲ್ಲಿ ಇಬ್ಬರೂ ಮನನೊಂದು ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



