ವಿಜಯಸಾಕ್ಷಿ ಸುದ್ದಿ, ಅಣ್ಣಿಗೇರಿ: ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರು ಜೀವಿತಾವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಅಪ್ರತಿಮ ಸಾಧನೆಗಳನ್ನು ಸ್ಮರಿಸುವ ‘ಶರಣ ಶ್ರಾವಣ’ ಉಪನ್ಯಾಸ ಮಾಲಿಕೆ ಆ.15ರಿಂದ ಸೆ.5ರವರೆಗೆ ಪಟ್ಟಣದಲ್ಲಿ ನಡೆಯಲಿದೆ.
ಸ್ಥಳೀಯ ಬಸವ ಕೇಂದ್ರ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ಯುವ ಘಟಕದ ಆಶ್ರಯದಲ್ಲಿ ಪ್ರತಿ ಶನಿವಾರ ಸಂಜೆ ಪಟ್ಟಣದ ನಿಂಗಮ್ಮ ಹೂಗಾರ ವಿದ್ಯಾಲಯದ ಬಳಿಯ ತೋಂಟದಾರ್ಯ ಪ್ರಸಾದ ನಿಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ನಾಲ್ಕು ವಾರಗಳ ಕಾಲ ನಡೆಯಲಿರುವ ಉಪನ್ಯಾಸ ಮಾಲಿಕೆಯಲ್ಲಿ ಕ್ರಮವಾಗಿ ಡಾ. ಶಾಂತಾ ಲಕ್ಷ್ಮೇಶ್ವರ, ಸುಮಿತ್ರಾ ಹುಣಸಿಮರದ, ಬಿ.ಡಿ. ನಲವಡಿ ಹಾಗೂ ಎನ್.ಎಸ್. ಮೇಲ್ಮರಿ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮಗಳಿಗೆ ಕ್ರಮವಾಗಿ ಮಲ್ಲಿಕಾರ್ಜುನ ಸುರಕೋಡ, ಶಿವಯೋಗಿ ಹುಬ್ಬಳ್ಳಿ, ವೀರೇಶ ಶಾನುಭೋಗರ ಹಾಗೂ ಲಿಂಗರಾಜ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ.
ಎಸ್.ವಿ. ಕುರಡಗಿ, ಡಾ. ಸುಧಾ ಕೌಜಗೇರಿ, ಚನ್ನಬಸಮ್ಮ ಹಗೇದಕಟ್ಟಿಮಠ ಹಾಗೂ ಕಿರಣ ಬೂದಿಹಾಳ ಉಪಸ್ಥಿತರಿರುವರು. ದಾಸೋಹ ಸೇವೆಯನ್ನು ಶೋಭಾ ಕುರಡಗಿ, ಕವಿತಾ ಬಿರಸಲ್, ಸಾವಿತ್ರಿ ಹರ್ಲಾಪೂರ, ಅನ್ನಪೂರ್ಣ ಆಕಳವಾಡಿ ಹಾಗೂ ಆದ್ಯಾ ದಿವಟರ ವಹಿಸಿಕೊಂಡಿದ್ದಾರೆ.
ಶರಣ ಸಾಹಿತ್ಯ ಹಾಗೂ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರ ಸಾಧನೆಗಳ ಕುರಿತು ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.



