HomeGadag Newsಆ.15ರಂದು ‘ನಿಮ್ಮ ಸೇವೆಗೆ ಅವಕಾಶ ಕೊಡಿ’ ಸಮಾವೇಶ

ಆ.15ರಂದು ‘ನಿಮ್ಮ ಸೇವೆಗೆ ಅವಕಾಶ ಕೊಡಿ’ ಸಮಾವೇಶ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಗತ್ಯ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಎಚ್.ಕೆ. ಪಾಟೀಲ ಸೇವಾ ತಂಡದ ವತಿಯಿಂದ ಆ.15ರಂದು ಸಂಜೆ 5 ಗಂಟೆಗೆ ಕಾಟನ್ ಸೇಲ್ಸ್ ಸೊಸೈಟಿ ಆವರಣದಲ್ಲಿ ‘ನಿಮ್ಮ ಸೇವೆಗೆ ಅವಕಾಶ ಕೊಡಿ’ ಸಮಾವೇಶ ಆಯೋಜಿಸಲಾಗಿದೆ ಎಂದು ಸೇವಾ ತಂಡದ ಮುಖ್ಯಸ್ಥ ಪ್ರಭು ಬುರುಬುರೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಅಗತ್ಯವಿರುವ ಆರೋಗ್ಯ, ಸಾಮಾಜಿಕ ಹಾಗೂ ಆಡಳಿತಾತ್ಮಕ ಸೇವೆಗಳನ್ನು ಒಂದೇ ವೇದಿಕೆಯಡಿ ತಲುಪಿಸಲು ತಂಡ ಕಾರ್ಯನಿರ್ವಹಿಸುತ್ತಿದೆ. ಕೈಗೊಂಡ ಪ್ರತಿಯೊಂದು ಸೇವಾ ಕಾರ್ಯದ ವಿವರಗಳನ್ನು ದಾಖಲಿಸುವ ಮೂಲಕ ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ. ಜನರ ಸಮಸ್ಯೆಗಳನ್ನು ಗುರುತಿಸಿ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವ ಜವಾಬ್ದಾರಿಯನ್ನು ತಂಡ ವಹಿಸಿಕೊಂಡಿದೆ ಎಂದರು.

ಕಿಡ್ನಿ ಸಮಸ್ಯೆ, ಮೊಣಕಾಲು ನೋವು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ನೆರವು ನೀಡಲಾಗುತ್ತಿದ್ದು, ಅಂಗಾಂಗ ದಾನ, ನೇತ್ರದಾನ, ರಕ್ತದಾನ, ಮಹಿಳಾ–ಮಕ್ಕಳ ಆರೋಗ್ಯ, ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಸೇವೆಗಳಿಗೂ ಒತ್ತು ನೀಡಲಾಗಿದೆ ಎಂದರು.

ವೆಬ್, ಆ್ಯಪ್ ಮೂಲಕ ಸಮಸ್ಯೆಗಳಿಗೆ ಪರಿಹಾರ

ಯುವ ಕಾಂಗ್ರೆಸ್ ಘಟಕದ ಜಿಲ್ಲಾ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಹಿಂದೆ ಅಗತ್ಯವಿದ್ದಾಗ ಮಾತ್ರ ಜನರು ಸೇವಾ ತಂಡವನ್ನು ಸಂಪರ್ಕಿಸುತ್ತಿದ್ದರು. ಇದೀಗ ಪ್ರತಿ ಮನೆಗೂ ಸೇವೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ವೆಬ್ ಹಾಗೂ ಆ್ಯಪ್ ಮೂಲಕ ವಿವಿಧ ಯೋಜನೆಗಳ ಮಾಹಿತಿ ಪಡೆದು, ಸಾರ್ವಜನಿಕರ ಸಮಸ್ಯೆಗಳನ್ನು ದಾಖಲಿಸಿ ಪರಿಹರಿಸಲು ಸೇವಾ ತಂಡದ ವಾರ್ ರೂಮ್ ಕಾರ್ಯನಿರ್ವಹಿಸುತ್ತಿದೆ ಎಂದರು.

200ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ

ಡಾ. ಎಸ್.ಆರ್. ನಾಗನೂರು ಮಾತನಾಡಿ, ಕಡಿಮೆ ಅವಧಿಯಲ್ಲಿ 100ಕ್ಕೂ ಹೆಚ್ಚು ಜಾಯಿಂಟ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ಸೇರಿದಂತೆ 200ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಹೆಣ್ಣು ಮಗು ಜನಿಸಿದಾಗ ಯಾವುದೇ ಬಿಲ್ ವಿಧಿಸದೆ ನೆರವು ನೀಡುವಂತಹ ಸಾಮಾಜಿಕ ಕಾಳಜಿಯ ಸೇವೆಗಳನ್ನೂ ಕೈಗೊಳ್ಳಲಾಗುತ್ತಿದೆ. ಅಂಗಾಂಗ ದಾನ ಕ್ಷೇತ್ರದಲ್ಲೂ ರಾಜ್ಯದಲ್ಲಿ ಗಮನಾರ್ಹ ಸೇವೆ ಸಲ್ಲಿಸಿ ಮೂರನೇ ಸ್ಥಾನ ತಲುಪಿದ್ದೇವೆ ಎಂದರು.

ಆ.15ರಂದು ನಡೆಯುವ ಸಮಾವೇಶದಲ್ಲಿ ಇದುವರೆಗೆ ಕೈಗೊಂಡ ಸೇವಾ ಕಾರ್ಯಗಳು, ಮುಂದಿನ ಯೋಜನೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದ ಕುರಿತು ಮಾಹಿತಿ ನೀಡಲಾಗುವುದು. ಅನಿಲ್ ಕುಮಾರ್ ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಬಿ. ಅಸೂಟಿ, ಎಂ.ಸಿ. ಶೇಖ, ಶಿವಣ್ಣ ಬಳ್ಳಾರಿ, ಸಿದ್ದು ಪಾಟೀಲ, ಅಶೋಕ ಮಂದಾಲಿ, ಅನ್ವರ್ ನದಾಫ್ ಸೇರಿದಂತೆ ಸೇವಾ ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.

“ಪ್ರತಿ ಮನೆಗೂ ಸೇವಾ ತಂಡದ ಸೇವೆ ತಲುಪಬೇಕು ಎಂಬ ಉದ್ದೇಶದಿಂದ ಅಭಿಯಾನ ಆರಂಭಿಸಲಾಗಿದೆ. ವಾರ್ಡ್‌ವಾರು ಸುಮಾರು 11 ಸಾವಿರ ಮನೆಗಳನ್ನು ಸಂಪರ್ಕಿಸುವ ಗುರಿ ಹೊಂದಿದ್ದು, ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸಲು ಬರುವವರಿಗೂ ಅವಕಾಶ ನೀಡಲಾಗುವುದು. ಮುಂದಿನ ದಿನಗಳಲ್ಲಿ ದಿನದ 24 ಗಂಟೆಯೂ ಸೇವೆ ಒದಗಿಸುವ ವ್ಯವಸ್ಥೆ ರೂಪಿಸುವ ಉದ್ದೇಶವಿದೆ.”

                         — ಪ್ರಭು ಬುರುಬುರೆ, ಸೇವಾ ತಂಡದ ಮುಖ್ಯಸ್ಥ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img