ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಆಗಸ್ಟ್ 15ರಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ‘ಉದ್ಯೋಗ ಚೀಟಿ ಮೇಳ’ (ಜಾಬ್ ಕಾರ್ಡ್ ಮೇಳ) ಅಭಿಯಾನವನ್ನು ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೂಚಿಸಿದ್ದಾರೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೆ ನೀಡಿರುವ ಮಾರ್ಗಸೂಚಿಯಂತೆ, ಈವರೆಗೆ ಯೋಜನೆಯಡಿ ನೋಂದಣಿಯಾಗದ ಅರ್ಹ ಗ್ರಾಮೀಣ ಕುಟುಂಬಗಳನ್ನು ಗುರುತಿಸಿ, ಅವರಿಂದ ಅರ್ಜಿ ಪಡೆದು VBGRAMG ಯೋಜನೆಯಡಿ ಹೊಸ ಮಾದರಿಯ ಉದ್ಯೋಗ ಚೀಟಿಗಳನ್ನು ಒದಗಿಸಬೇಕು. ಅಲ್ಲದೆ, ಗ್ರಾಮಸ್ಥರಿಗೆ ಯೋಜನೆಯ ಕುರಿತು ಸಮಗ್ರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಜಾಬ್ ಕಾರ್ಡ್ ಮೇಳದ ಅಂಗವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ-ಮನೆ ಭೇಟಿ, ಗ್ರಾಮಸಭೆ ಹಾಗೂ ‘ಸ್ವಚ್ಛತಾ ವಾಹಿನಿ’ ಮೂಲಕ ಪ್ರಚಾರ ಸೇರಿದಂತೆ ವಿವಿಧ IEC ಚಟುವಟಿಕೆಗಳನ್ನು ಕೈಗೊಂಡು ಜನರಲ್ಲಿ ಗ್ರಾಮೀಣ ರೋಜಗಾರ್ ಗ್ಯಾರಂಟಿ ಕಾರ್ಡ್ಗಳ ಕುರಿತು ಜಾಗೃತಿ ಮೂಡಿಸಬೇಕು. ಅರ್ಹ ಕುಟುಂಬಗಳಿಂದ ಜಾಬ್ ಕಾರ್ಡ್ಗಾಗಿ ಅರ್ಜಿ ಸ್ವೀಕರಿಸಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕಿದೆ.
ಅಭಿಯಾನದ ಸಂದರ್ಭದಲ್ಲಿ ಈಗಾಗಲೇ ನೋಂದಣಿಯಾಗಿ ಉದ್ಯೋಗ ಚೀಟಿ ಹೊಂದಿರುವ ಕುಟುಂಬಗಳ ವಿವರಗಳನ್ನು ಪರಿಶೀಲಿಸಬೇಕು. ಉದ್ಯೋಗ ಚೀಟಿಯ ಕಾಲಾವಧಿ ಮುಗಿದಿದ್ದರೆ ನವೀಕರಿಸುವುದು, ಸದಸ್ಯರ ಸೇರ್ಪಡೆ, e-KYC ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕೂ ಆದ್ಯತೆ ನೀಡಬೇಕು. ಜಾಬ್ ಕಾರ್ಡ್ಗೆ ಸಂಬಂಧಿಸಿದ ಅರ್ಜಿಗಳ ಸ್ವೀಕೃತಿ ಹಾಗೂ ವಿಲೇವಾರಿ ಪ್ರಕ್ರಿಯೆಯನ್ನು ನಿಯಮಾನುಸಾರ ನಡೆಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಲು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಬ್ ಕಾರ್ಡ್ ಮೇಳದ ಕುರಿತು ವ್ಯಾಪಕ ಪ್ರಚಾರ ಕೈಗೊಂಡು, ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಅಭಿಯಾನದ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಕೈಗೊಂಡಿರುವ ಚಟುವಟಿಕೆಗಳ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ವಿಶೇಷವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಜನರಿಗೆ ಯೋಜನೆಯ ಮಾಹಿತಿ ತಲುಪಿಸುವುದು ಮತ್ತು ಅರ್ಹ ಕುಟುಂಬಗಳನ್ನು ಗುರುತಿಸುವ ಕಾರ್ಯಕ್ಕೆ ಒತ್ತು ನೀಡಬೇಕಾಗಿದೆ.
ಆಗಸ್ಟ್ 15ರಿಂದ ಆರಂಭವಾಗಲಿರುವ ಈ ಅಭಿಯಾನವು ಗ್ರಾಮೀಣ ಜನರಿಗೆ VBGRAMG ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
“ಆಗಸ್ಟ್ 15ರಿಂದ ಆರಂಭವಾಗುವ ಉದ್ಯೋಗ ಚೀಟಿ ಮೇಳವನ್ನು ಜಿಲ್ಲೆಯ ಎಲ್ಲ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಅರ್ಹ ಗ್ರಾಮೀಣ ಕುಟುಂಬಗಳನ್ನು ಗುರುತಿಸಿ, ಅವರಿಗೆ ಉದ್ಯೋಗ ಚೀಟಿ ಒದಗಿಸುವುದರ ಜತೆಗೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು.”

ಸಿ.ಆರ್. ಮುಂಡರಗಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ



